ನಾಸಿಕ್, ಮಹಾರಾಷ್ಟ್ರ: ನಾಸಿಕ್‌ನ (Nasik) ತ್ರಯಂಬಕೇಶ್ವರ ದೇವಾಲಯ (Trimbakeshwar Temple) ಪ್ರವೇಶಿಸಲು ಮುಂದಾದ ಮುಸ್ಲಿಮ್ ಸಮುದಾಯದ ಕೆಲವರನ್ನು ದ್ವಾರದಲ್ಲೇ ತಡೆದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಾಲ್ಕಾರು ಮುಸ್ಲಿಮ್ ಜನರು, ದೇವರಿಗೆ ಚಾದರ್(ಪವಿತ್ರ ವಸ್ತ್ರ) ಅರ್ಪಿಸಲು ಮುಂದಾಗಿದ್ದರು. ತಲೆಯ ಮೇಲೆ ಚಾದರ್ ಹೊತ್ತ ಮುಸ್ಲಿಮರು ದೇವಾಲಯ ಪ್ರವೇಶಿಸಲು ಮುಂದಾಗುತ್ತಾರೆ. ಆಗ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಡೆದುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆಯು ಕಳೆದ ಶನಿವಾರ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಕುರಿತು ದೇವೇಂದ್ರ ಫಡ್ನವೀಸ್ ಅವರ ಕಚೇರಿಯು ಟ್ವೀಟ್ ಮಾಡಿ, ಮಾಹಿತಿಯನ್ನು ನೀಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಉಪ ಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ತ್ರಯಂಬಕೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಮೂಲಕ ಗುಂಪೊಂದು ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ದೇವೇಂದ್ರ ಫಡ್ನವೀಸ್ ಅವರ ಟ್ವೀಟ್
ಇದನ್ನೂ ಓದಿ: Maharashtra Election: ನಾಗ್ಪುರದಲ್ಲಿ ಬಿಜೆಪಿಗೆ ಮುಖಭಂಗ, ಪರಿಷತ್ ಚುನಾವಣೆಯಲ್ಲಿ ಎಂವಿಎ ಅಭ್ಯರ್ಥಿಗೆ ಗೆಲುವು
ಈ ಘಟನೆಯ ಕುರಿತು ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಚಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಎಸ್ಐಟಿಯು ಈ ಘಟನೆ ಮಾತ್ರವಲ್ಲದೇ, ಕಳೆದ ವರ್ಷವೂ ಮುಸ್ಲಿಮರು ತ್ರಯಂಬಕೇಶ್ವರ ದೇಗುಲದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಲು ಮುಂದಾಗಿದ್ದ ಘಟನೆಯ ಕುರಿತು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.