Site icon Vistara News

Narendra Modi: ‘ನನ್ನ ಹೆಸರಿಗೆ ದೇಶದ ಒಳಗೆ, ಹೊರಗೆ ಧಕ್ಕೆ ತರಲು ಸುಪಾರಿ’; ಪ್ರತಿಪಕ್ಷಗಳಿಗೆ ಮೋದಿ ಚಾಟಿ

Some people hellbent to dent my image; they have given Supari; Says Narendra Modi

ನರೇಂದ್ರ ಮೋದಿ

ಭೋಪಾಲ್‌: ಮಧ್ಯಪ್ರದೇಶದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. “ದೇಶದ ಒಳಗೆ ಹಾಗೂ ದೇಶದ ಹೊರಗೆ ನನ್ನ ಹೆಸರಿಗೆ ಧಕ್ಕೆ ತರಲು ಕೆಲವು ಜನ (ಪ್ರತಿಪಕ್ಷಗಳು) ಸುಪಾರಿ ಕೊಟ್ಟಿದ್ದಾರೆ. ಎಷ್ಟು ಸಾಧ್ಯವೋ, ಅಷ್ಟು ನನ್ನ ಹೆಸರಿಗೆ ಮಸಿ ಬಳಿಯುವುದು ಅವರ ಉದ್ದೇಶವಾಗಿದೆ” ಎಂದು ಚಾಟಿ ಬೀಸಿದ್ದಾರೆ.

ಭೋಪಾಲ್‌-ದೆಹಲಿ ಮಧ್ಯೆ ಸಂಪರ್ಕ ಕಲ್ಪಿಸುವ, ದೇಶದ 11ನೇ ಹಾಗೂ ಮಧ್ಯಪ್ರದೇಶದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಧ್ಯಪ್ರದೇಶದ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. “ಇದಕ್ಕೂ ಮೊದಲಿದ್ದ ಸರ್ಕಾರಗಳು ತಮ್ಮ ಕುಟುಂಬವೇ ದೇಶದ ಕುಟುಂಬ ಎಂದು ಭಾವಿಸಿದ್ದವು. ಹಾಗಾಗಿ, ಆ ಸರ್ಕಾರಗಳು ಬಡವರು ಹಾಗೂ ಮಧ್ಯಮ ವರ್ಗದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಇದಕ್ಕೆ ದೇಶದ ರೈಲ್ವೆ ವ್ಯವಸ್ಥೆಯೇ ಸಾಕ್ಷಿ” ಎಂದರು.

ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ

ಜನರೇ ನನಗೆ ಸುರಕ್ಷಾ ಕವಚ

“ನನ್ನ ಹೆಸರಿಗೆ ಧಕ್ಕೆ ತರಲು 2014ರಿಂದಲೂ ಯತ್ನಿಸಲಾಗುತ್ತಿದೆ. ನನ್ನ ಹೆಸರಿಗೆ ಮಸಿ ಬಳಿಯುವ ಮೂಲಕವೇ ಅವರು ತಮ್ಮ ಗುರಿ ಸಾಧಿಸಲು ಯತ್ನಿಸುತ್ತಿದ್ದಾರೆ. ಕೆಲವರು ಭಾರತದಲ್ಲಿಯೇ ನನ್ನ ಹೆಸರಿಗೆ ಧಕ್ಕೆ ತರಲು ಯತ್ನಿಸುತ್ತಿದ್ದರೆ, ಇನ್ನೂ ಕೆಲವರು ದೇಶದ ಹೊರಗೆ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅವರು ಸುಪಾರಿ ಕೊಟ್ಟಿದ್ದಾರೆ. ಆದರೆ, ಭಾರತದ ಸಾಮಾನ್ಯ ಜನರೇ ನನ್ನ ಸುರಕ್ಷಾ ಕವಚ ಎಂಬುದು ಅವರಿಗೆ ಗೊತ್ತಿಲ್ಲ” ಎಂದು ಪ್ರತಿಪಕ್ಷಗಳ ಹೆಸರು ಹೇಳದೆ ಕುಟುಕಿದರು.

ವಂದೇ ಭಾರತ್‌ ರೈಲಿನಲ್ಲಿ ಮಕ್ಕಳ ಜತೆ ಮಾತುಕತೆ

‘ಏಪ್ರಿಲ್‌ ಫೂಲ್‌’ ಉಲ್ಲೇಖಿಸಿ ತಿರುಗೇಟು

ಏಪ್ರಿಲ್‌ 1ರಂದೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಕುರಿತು ಮಾತನಾಡುತ್ತ, ಮೋದಿ ಅವರು ‘ಏಪ್ರಿಲ್‌ ಫೂಲ್’‌ ಉಲ್ಲೇಖಿಸಿಯೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ದೇಶದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಸರ್ಕಾರಗಳು ಓಲೈಕೆಯ ರಾಜಕಾರಣದಲ್ಲಿಯೇ ನಿರತವಾಗಿದ್ದವು. ಆದರೆ, ನಮ್ಮ ಸರ್ಕಾರವು ಅಭಿವೃದ್ಧಿಯನ್ನೇ ಗಮನದಲ್ಲಿ ಇಟ್ಟುಕೊಂಡಿದೆ. ಮೋದಿ ಅವರು ಏಪ್ರಿಲ್‌ ಫೂಲ್‌ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ದೂಷಿಸಬಹುದು. ಆದರೆ, ಏಪ್ರಿಲ್‌ 1ರಂದೇ ನಾವು ವಂದೇ ಭಾರತ್‌ ರೈಲಿಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿಯ ಹೊಸ ವೇಗಕ್ಕೆ ನಾಂದಿ ಹಾಡುತ್ತಿದ್ದೇವೆ” ಎಂದರು.

ಚಾಲನೆ ಕುರಿತು ಮೋದಿ ಟ್ವೀಟ್

ಇದನ್ನೂ ಓದಿ: Modi in Karnataka : ಹುಲಿ ಪ್ರಾಜೆಕ್ಟ್‌ ಕಾರ್ಯಕ್ರಮಕ್ಕೆ ಬರುವ ಪ್ರಧಾನಿ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡ್ತಾರಾ?

ವಂದೇ ಭಾರತ್‌ ರೈಲಿನ ವಿಶೇಷ

ದೇಶದ ಹಲವು ನಗರಗಳಲ್ಲಿ ಓಡಾಡುತ್ತಿರುವ ಅತ್ಯಾಧುನಿಕ ಸೌಲಭ್ಯಗಳು ಇದರಲ್ಲಿವೆ. ಭೋಪಾಲ್‌-ದೆಹಲಿ ಮಧ್ಯೆ ಸಂಪರ್ಕ ಕಲ್ಪಿಸುವ ಇದು, 708 ಕಿಲೋ ಮೀಟರ್‌ ದೂರವನ್ನು ಕೇವಲ ಏಳೂವರೆ ಗಂಟೆಯಲ್ಲಿ ಕ್ರಮಿಸಲಿದೆ. ಈ ಮಾರ್ಗದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲು ಚಲಿಸಲಿದೆ. ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15ರಂದು ದೇಶದ ಮೊದಲ ದೆಹಲಿ ಹಾಗೂ ವಾರಾಣಸಿ ನಡುವಿನ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದರು. ಮಧ್ಯಪ್ರದೇಶದಲ್ಲಿ ಶನಿವಾರ ಚಾಲನೆ ನೀಡಿರುವುದು ಸೇರಿ ಸದ್ಯ ದೇಶದಲ್ಲಿ 11 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ.

Exit mobile version