Site icon Vistara News

Sonam Wangchuk: 21 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ʼ3 ಈಡಿಯಟ್ಸ್‌ʼ ಸಿನಿಮಾ ಖ್ಯಾತಿಯ ಸೋನಮ್ ವಾಂಗ್ಚುಕ್

Sonam Wangchuk

Sonam Wangchuk

ಲಡಾಕ್‌: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ (Ladakh)ಗೆ ರಾಜ್ಯ ಸ್ಥಾನಮಾನ ಒದಗಿಸಬೇಕು, ಆರನೇ ಶೆಡ್ಯೂಲ್ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ನೀಡಬೇಕು ಮತ್ತು ದುರ್ಬಲವಾದ ಹಿಮಾಲಯನ್ ಪರಿಸರವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 6ರಿಂದ ಲೇಹ್‌ (Leh)ನ ಎನ್‌ಡಿಎಸ್ ಸ್ಟೇಡಿಯಂನಲ್ಲಿ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಖ್ಯಾತ ಶಿಕ್ಷಣ ಸುಧಾರಣಾವಾದಿ, ಎಂಜಿನಿಯರ್‌, ʼ3 ಈಡಿಯಟ್ಸ್‌ʼ (3 Idiots) ಸಿನಿಮಾ ಖ್ಯಾತಿಯ ಸೋನಮ್ ವಾಂಗ್ಚುಕ್ (Sonam Wangchuk) ಅಂತ್ಯಗೊಳಿಸಿದ್ದಾರೆ. ಮಂಗಳವಾರ (ಮಾರ್ಚ್‌ 26) ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಅವರು ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಕಳೆದ 21 ದಿನಗಳಿಂದ ವಾಂಗ್ಚುಕ್ ಅವರು ಉಪ್ಪು ಮತ್ತು ನೀರು ಮಾತ್ರ ಸೇವಿಸುತ್ತ ನಡುಗುವ ಚಳಿಯಲ್ಲಿಯೂ ಸತ್ಯಾಗ್ರಹ ನಡೆಸಿದ್ದರು. ಅವರು ಉಪವಾಸ ಕೊನೆಗೊಳಿಸುತ್ತಿದ್ದಂತೆ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಗುಂಪುಗೂಡಿದ್ದರು. ಅಲ್ಲದೆ ಮಹಿಳಾ ಗುಂಪುಗಳು ಈಗ ಅದೇ ಬೇಡಿಕೆಗಳ ಮೇಲೆ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ತಿಳಿಸಿವೆ.

“ಇದು 21 ದಿನಗಳ ಉಪವಾಸ ಸತ್ಯಾಗ್ರಹದ ಮೊದಲ ಹಂತದ ಅಂತ್ಯ. ಹಾಗಂತ ಆಂದೋಲನದ ಅಂತ್ಯವಲ್ಲ. ನಾಳೆಯಿಂದ ಮಹಿಳೆಯರ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಲಿದೆ” ಎಂದು ವಾಂಗ್ಚುಕ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ವಾಂಗ್ಚುಕ್ ಅವರು, ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಲಡಾಖ್ ಜನರ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರು ಹೆಪ್ಪುಗಟ್ಟಿದ ನೀರಿನ ಲೋಟವನ್ನು ತೋರಿಸಿದ್ದರು. ತಾಪಮಾನವು -10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೂ 350 ಜನರು ಉಪವಾಸದಲ್ಲಿ ತಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದರು.

“ಲಡಾಖ್‌ನ ಹಿಮಾಲಯ ಪರ್ವತಗಳ ದುರ್ಬಲ ಪರಿಸರ ವ್ಯವಸ್ಥೆ ಮತ್ತು ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶಿಷ್ಟ ಸ್ಥಳೀಯ ಬುಡಕಟ್ಟು ಸಂಸ್ಕೃತಿಗಳನ್ನು ರಕ್ಷಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ. ನಾವು ಮೋದಿ ಮತ್ತು ಅಮಿತ್ ಶಾ ಜಿ ಅವರನ್ನು ಕೇವಲ ರಾಜಕಾರಣಿಗಳು ಎಂದು ಭಾವಿಸುವುದಿಲ್ಲ. ಅವರು ನಮ್ಮ ಪ್ರತಿನಿಧಿಗಳುʼʼ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದರು.

ಯಾರು ಈ ಸೋನಮ್ ವಾಂಗ್ಚುಕ್ ?

2009ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼ3 ಈಡಿಯಟ್ಸ್‌ʼಗೆ ವಾಂಗ್ಚುಕ್ ಸ್ಫೂರ್ತಿಯಾಗಿದ್ದರು. ರಾಜ್‌ ಕುಮಾರ್‌ ಹಿರಾನಿ ನಿರ್ದೇಶನದ ಈ ಚಿತ್ರವನ್ನು ಚೇತನ್‌ ಭಗತ್‌ ಅವರ ʼ5 ಪಾಯಿಂಟ್‌ ಸಮ್‌ವನ್‌ʼ ಕಾದಂಬರಿಯ ಆಧಾರಲ್ಲಿ ನಿರ್ಮಿಸಲಾಗಿತ್ತು. ಆಮೀರ್ ಖಾನ್ ಪಾತ್ರ ಫುನ್ಸುಖ್ ವಾಂಗ್ಡುಗೆ ಸೋನಮ್ ವಾಂಗ್ಚುಕ್ ಸ್ಫೂರ್ತಿಯಾಗಿದ್ದರು. ಆರ್‌.ಮಾಧವನ್‌, ಶರ್ಮನ್‌ ಜೋಷಿ, ಕರೀನಾ ಕಪೂರ್‌, ಬೋಮನ್‌ ಇರಾನಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. 1966ರಲ್ಲಿ ಜನಿಸಿದ ವಾಂಗ್ಚುಕ್ ಅವರು ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದಾರೆ. ಹಿಮಾಲಯನ್ ಇನ್‌ಸ್ಟಿಟ್ಯೂಟ್‌ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (HIAL)ನ ನಿರ್ದೇಶಕರಾಗಿದ್ದಾರೆ. 2018ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Sonam Wangchuk: 3 ಈಡಿಯಟ್ಸ್‌ ಸಿನಿಮಾಗೆ ಸ್ಫೂರ್ತಿಯಾದ ಸೋನಂ ವಾಂಗ್ಚುಕ್‌ ಗೃಹಬಂಧನ, ಏನಿದಕ್ಕೆ ಕಾರಣ?

Exit mobile version