Site icon Vistara News

ಮೈ ಕೊರೆವ ಚಳಿಯಲ್ಲಿ ಆಮರಣಾಂತ ಉಪವಾಸ ಕೈಗೊಂಡ ʼ3 ಈಡಿಯಟ್ಸ್‌ʼ ಖ್ಯಾತಿಯ ಸೋನಮ್ ವಾಂಗ್ಚುಕ್; ಏನಿವರ ಬೇಡಿಕೆ?

Sonam Wangchuk

Sonam Wangchuk

ಲಡಾಕ್‌: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ (Ladakh)ಗೆ ರಾಜ್ಯ ಸ್ಥಾನಮಾನ ಒದಗಿಸಬೇಕು ಮತ್ತು ಆರನೇ ಶೆಡ್ಯೂಲ್ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಖ್ಯಾತ ಶಿಕ್ಷಣ ಸುಧಾರಣಾವಾದಿ, ಎಂಜಿನಿಯರ್‌ ಸೋನಮ್ ವಾಂಗ್ಚುಕ್ (Sonam Wangchuk) ಮಾರ್ಚ್ 6ರಿಂದ ಲೇಹ್‌ (Leh)ನ ಎನ್‌ಡಿಎಸ್ ಸ್ಟೇಡಿಯಂನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರಿಗೆ ಬೆಂಬಲ ನೀಡಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (Kargil Democratic Alliance) ಮಾರ್ಚ್ 20ರಂದು ಅರ್ಧ ದಿನದ ಸಾರ್ವತ್ರಿಕ ಮುಷ್ಕರ ನಡೆಸುತ್ತಿದೆ. ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼ3 ಈಡಿಯಟ್ಸ್‌ʼನ ಆಮೀರ್ ಖಾನ್ ಪಾತ್ರ ಫುನ್ಸುಖ್ ವಾಂಗ್ಡುಗೆ ಸೋನಮ್ ವಾಂಗ್ಚುಕ್ ಸ್ಫೂರ್ತಿಯಾಗಿದ್ದರು.

ಮೈ ಕೊರೆವ ಚಳಿ

ಲೇಹ್‌ನಲ್ಲಿ ಈಗ ಮೈ ಕೊರೆವ ಚಳಿ ಇದೆ. ಕೆಲವೊಮ್ಮೆ ಇಲ್ಲಿ ರಾತ್ರಿಯ ತಾಪಮಾನವು ಮೈನಸ್-16 ಡಿಗ್ರಿ ಸೆಲ್ಸಿಯಸ್‌ವರರೆಗೂ ಕುಸಿಯುತ್ತದೆ. ಆದರೂ ಸೋನಮ್ ಇದ್ಯಾವುದಕ್ಕೂ ಕುಗ್ಗದೆ ತಮ್ಮ ಬೆಂಬಲಿಗರೊಂದಿಗೆ ಸತ್ಯಾಗ್ರಹ ಮುಂದುವರಿಸಿದ್ದಾರೆ. ಮಂಗಳವಾರ (ಮಾರ್ಚ್‌ 19) ಈ ಬಗ್ಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಬೃಹತ್‌ ಮೆರವಣಿಗೆ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

“ನಮ್ಮ ಅಲೆಮಾರಿಗಳು ದಕ್ಷಿಣದಲ್ಲಿ ಬೃಹತ್ ಭಾರತೀಯ ಕೈಗಾರಿಕಾ ಸ್ಥಾವರ ಸ್ಥಾಪನೆಗಾಗಿ ಮತ್ತು ಉತ್ತರದಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರಧಾನ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ವಾಸ್ತವವನ್ನು ಮನದಟ್ಟು ಮಾಡಲು ನಾವು ಶೀಘ್ರದಲ್ಲೇ 10,000 ಲಡಾಖಿ ಕುರುಬರು ಮತ್ತು ರೈತರ ಮೆರವಣಿಗೆ ಯೋಜನೆಯನ್ನು ರೂಪಿಸಿದ್ದೇವೆ” ಎಂದು ಅವರು ಘೋಷಿಸಿದ್ದಾರೆ.

ವಾಂಗ್ಚುಕ್ ಬೇಡಿಕೆ ಏನು?

ಪ್ರತಿಭಟನೆಯ ಮೂಲಕ, ಸೋನಮ್ ವಾಂಗ್ಚುಕ್ ಲಡಾಕ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಅನುಷ್ಠಾನ ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸುತ್ತಿದ್ದಾರೆ. ಸಂವಿಧಾನದ ಆರನೇ ಶೆಡ್ಯೂಲ್ ಭೂಮಿಗೆ ರಕ್ಷಣೆ ಮತ್ತು ದೇಶದ ಬುಡಕಟ್ಟು ಜನಾಂಗದ ಪ್ರದೇಶಗಳ ಸ್ವಾಯತ್ತತೆಯನ್ನು ಖಾತರಿಪಡಿಸುತ್ತದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶ (ಯುಟಿ)ದ ಸ್ಥಾನಮಾನವನ್ನು ನೀಡಿತ್ತು.

ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳು, ಲಡಾಖ್‌ಗೆ ಪ್ರತ್ಯೇಕ ಲೋಕಸೇವಾ ಆಯೋಗ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ವಾಂಗ್ಚುಕ್ ಆಗ್ರಹಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಟ್ಯಾಗ್ ಲಡಾಖ್ ಅನ್ನು ಕೈಗಾರಿಕಾ ಶೋಷಣೆಗೆ ಗುರಿಯಾಗುವಂತೆ ಮಾಡಿದೆ. ಇದು ಹಿಮಾಲಯ ಪ್ರದೇಶದ ದುರ್ಬಲ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಭರವಸೆಯನ್ನು ಈಡೇರಿಸಿಲ್ಲ

“ನಾಲ್ಕು ವರ್ಷಗಳ ವಿಳಂಬ ತಂತ್ರಗಳ ನಂತರ, ಕೇಂದ್ರವು ಅಂತಿಮವಾಗಿ ಮಾರ್ಚ್ 4ರಂದು ನೇರವಾಗಿ ಭರವಸೆಗಳನ್ನು ಈಡೇರಿಸಲು ನಿರಾಕರಿಸಿದೆ. ಇದು ನಾಯಕರು, ಸರ್ಕಾರಗಳು ಮತ್ತು ಚುನಾವಣೆಗಳ ಮೇಲಿನ ನಂಬಿಕೆಯ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ವಾಂಗ್ಚುಕ್ ಆರೋಪಿಸಿದ್ದಾರೆ.

ಇದನ್ನೂ ಓದಿ: Mahua Moitra : ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಮಹುವಾಗೆ ಲೋಕ್​ಪಾಲ್​ ಬಲೆ

ಯಾರು ಈ ಸೋನಮ್ ವಾಂಗ್ಚುಕ್ ?

2009ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼ3 ಈಡಿಯಟ್ಸ್‌ʼಗೆ ವಾಂಗ್ಚುಕ್ ಸ್ಫೂರ್ತಿಯಾಗಿದ್ದರು. ರಾಜ್‌ ಕುಮಾರ್‌ ಹಿರಾನಿ ನಿರ್ದೇಶನದ ಈ ಚಿತ್ರವನ್ನು ಚೇತನ್‌ ಭಗತ್‌ ಅವರ ʼ5 ಪಾಯಿಂಟ್‌ ಸಮ್‌ವನ್‌ʼ ಕಾದಂಬರಿಯ ಆಧಾರಲ್ಲಿ ನಿರ್ಮಿಸಲಾಗಿತ್ತು. ಆಮೀರ್‌ ಖಾನ್‌, ಆರ್‌.ಮಾಧವನ್‌, ಶರ್ಮನ್‌ ಜೋಷಿ, ಕರೀನಾ ಕಪೂರ್‌, ಬೋಮನ್‌ ಇರಾನಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ಆಮೀರ್‌ ಖಾನ್‌ ಅವರ ಪಾತ್ರ ಸೋನಮ್ ವಾಂಗ್ಚುಕ್ ಅವರನ್ನೇ ಹೋಲುತ್ತದೆ. 1966ರಲ್ಲಿ ಜನಿಸಿದ ವಾಂಗ್ಚುಕ್ ಅವರು ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದಾರೆ. ಹಿಮಾಲಯನ್ ಇನ್‌ಸ್ಟಿಟ್ಯೂಟ್‌ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (HIAL)ನ ನಿರ್ದೇಶಕರಾಗಿದ್ದಾರೆ. 2018ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version