Site icon Vistara News

3ನೇ ದಿನದ ಇ.ಡಿ ವಿಚಾರಣೆಗೆ ಆಗಮಿಸಿದ ಸೋನಿಯಾ ಗಾಂಧಿ, ಇಂದೇ ಮುಗಿಯುತ್ತಾ ಪ್ರಶ್ನಾವಳಿ?

sonia gandhi

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೂರನೇ ದಿನದ ವಿಚಾರಣೆಗಾಗಿ ಬುಧವಾರ ೧೧.೩೦ರ ಹೊತ್ತಿಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಲೇವಾದೇವಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಸೋನಿಯಾ ಅವರು ಒಂಬತ್ತು ಗಂಟೆಗಳ ವಿಚಾರಣೆ ಎದುರಿಸಿದ್ದಾರೆ.

ಬುಧವಾರ ಬೆಳಗ್ಗೆ ೧೧.೦೦ರ ಹೊತ್ತಿಗೆ ಅವರು ಇ.ಡಿ. ಕಚೇರಿಗೆ ಪುತ್ರಿ ಪ್ರಿಯಾಂಕಾ ವಾದ್ರಾ ಅವರ ಜತೆ ಆಗಮಿಸಿದರು. ಅಧಿಕಾರಿಗಳು ಮೊದಲ ಹಂತದ ಪ್ರಕ್ರಿಯೆಗಳನ್ನು ಮುಗಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ನಡುವೆ, ಎಂದಿನಂತೆ ದಿಲ್ಲಿಯ ಎಐಸಿಸಿ ಕಚೇರಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಜುಲೈ ೨೧ರಂದು ಮೂರು ಗಂಟೆ, ಜುಲೈ ೨೬ರಂದು ಆರು ಗಂಟೆ ವಿಚಾರಣೆಗೆ ಒಳಪಡಿಸಲಾಗಿದೆ.

ಸೋನಿಯಾ ಗಾಂಧಿ ಅವರಿಗೆ ಕಳೆದ ಜೂನ್‌ ೨ರಂದೇ ಸಮನ್ಸ್‌ ಜಾರಿಗೊಳಿಸಲಾಗಿತ್ತಾದರೂ ಕೊರೊನಾ ಮತ್ತಿತರ ಆರೋಗ್ಯ ಕಾರಣಗಳಿಗಾಗಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಅಂತಿಮವಾಗಿ ಜುಲೈ ೨೧ರಂದು ಸೋನಿಯಾ ಮೊದಲ ಸುತ್ತಿನ ವಿಚಾರಣೆ ಎದುರಿಸಿದರು. ಅದಾದ ಬಳಿಕ ಜುಲೈ ೨೬ಕ್ಕೆ ಮರಳಿಬರುವಂತೆ ಸೂಚಿಸಲಾಗಿತ್ತು. ಮಂಗಳವಾರ ಎರಡನೇ ಸುತ್ತಿನ ವಿಚಾರಣೆ ನಡೆದು ಬುಧವಾರ ಅದು ಮೂರನೇ ಸುತ್ತಿಗೆ ಕಾಲಿಟ್ಟಿದೆ. ೭೫ ವರ್ಷದ ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸಮಸ್ಯೆಯೂ ಇರುವುದರಿಂದ ಅವರ ಜತೆಗೆ ಒಬ್ಬ ವೈದ್ಯರೂ ಇರುವಂತೆ ಅವಕಾಶ ನೀಡಲಾಗಿದೆ. ಅವರು ವಿಚಾರಣೆ ನಡೆಯುವ ಪಕ್ಕದ ಕೋಣೆಯಲ್ಲಿರುತ್ತಾರೆ.

ತ್ವರಿತ ಉತ್ತರ ನೀಡುತ್ತಿರುವ ಸೋನಿಯಾ
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ಅವರಿಗೂ ಮುನ್ನ ರಾಹುಲ್‌ ಗಾಂಧಿ ವಿಚಾರಣೆ ಎದುರಿಸಿದ್ದರು. ಅವರನ್ನು ಐದು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಸುಮಾರು ೫೫ ಗಂಟೆ ಅವರು ವಿಚಾರಣೆ ಎದುರಿಸಿದ್ದರು. ಅವರಿಗೆ ಸುಮಾರು ೧೦೦ ಪ್ರಶ್ನೆಗಳನ್ನು ಕೇಳಲಾಗಿತ್ತು.

ಸೋನಿಯಾ ಗಾಂಧಿ ಅವರಿಗೆ ಜುಲೈ ೨೧ರಂದು ೨೮ ಪ್ರಶ್ನೆಗಳನ್ನು ಕೇಳಲಾಗಿತ್ತು. ಮಂಗಳವಾರ ೫೫ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ ಎನ್ನಲಾಗಿದೆ. ಅಂದರೆ ಎರಡೇ ದಿನದಲ್ಲಿ ೭೩ ಪ್ರಶ್ನೆಗಳಿಗೆ ಸೋನಿಯಾ ಅವರು ಉತ್ತರಿಸಿದಂತಾಗಿದೆ. ಸೋನಿಯಾ ಗಾಂಧಿ ಅವರಿಗೂ ೧೦೦ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದ್ದು, ಅಷ್ಟೇ ಪ್ರಶ್ನೆಯಾದರೆ ಬುಧವಾರವೇ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ರಾಹುಲ್‌ ಗಾಂಧಿ ಅವರಿಗೆ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಗಳು ಇರಲಿಲ್ಲ. ಸೋನಿಯಾ ಗಾಂಧಿ ಅವರಿಗೆ ಈ ಬಗ್ಗೆ ಸ್ವಲ್ಪ ಮಾಹಿತಿ ಇರುವುದರಿಂದ ಅವರು ಸಿದ್ಧರಾಗಿ ತ್ವರಿತವಾಗಿ ಉತ್ತರಿಸಿರುವ ಸಾಧ್ಯತೆಗಳಿವೆ.

ಮುಂದೇನು?
೨೦೧೧ರಲ್ಲಿ ಯಂಗ್‌ ಇಂಡಿಯಾ ಸಂಸ್ಥೆಯು ಅಸೋಸಿಯೇಟ್‌ ಜರ್ನಲ್ಸ್‌ ಲಿಮಿಟೆಡ್‌ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ವಿವಾದ ಹುಟ್ಟಿಕೊಂಡಿದೆ. ನ್ಯಾಷನಲ್‌ ಹೆರಾಲ್ಡ್‌ ಈಗ ಯಂಗ್‌ ಇಂಡಿಯಾದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ೨೦೧೩ರಲ್ಲಿ ಮೊದಲ ಬಾರಿಗೆ ಈ ಹಣಕಾಸು ವ್ಯವಹಾರದ ಬಗ್ಗೆ ತೀವ್ರವಾದ ಪ್ರಶ್ನೆಗಳು ಎದ್ದು ಕೋರ್ಟ್‌ ಮೆಟ್ಟಿಲೇರಿತು. ಹಸ್ತಾಂತರ ವ್ಯವಹಾರದಲ್ಲಿ ಪ್ರಧಾನವಾಗಿ ಭಾಗಿಯಾಗಿದ್ದ ಮೋತಿಲಾಲ್‌ ವೋರಾ ಮತ್ತು ಆಸ್ಕರ್‌ ಫರ್ನಾಂಡಿಸ್‌ ಅವರಿಬ್ಬರೂ ಈಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್‌ ಭನ್ಸಾಲ್‌ ಅವರು ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಇದೀಗ ರಾಹುಲ್‌ ಮತ್ತು ಸೋನಿಯಾ ಗಾಂಧಿ ಅವರ ವಿಚಾರಣೆ ಮುಕ್ತಾಯವಾದ ಬಳಿಕ ಇ.ಡಿ. ಮುಂದೇನು ಮಾಡಲಿದೆ ಎಂಬುದು ಒಂದೆರಡು ದಿನದಲ್ಲಿ ತಿಳಿಯಲಿದೆ.
National Herald Case | ಆರು ಗಂಟೆಗಳ ಕಾಲ ಸೋನಿಯಾ ಗಾಂಧಿ ವಿಚಾರಣೆ

Exit mobile version