Site icon Vistara News

Rajya Sabha Election: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸೋನಿಯಾ ಗಾಂಧಿ

Sonia Gandhi

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ (Congress Leader Sonia Gandhi) ಅವರು ರಾಜಸ್ಥಾನದಿಂದ ರಾಜ್ಯಸಭೆಗೆ (Rajya Sabha Election) ಅವಿರೋಧವಾಗಿ ಆಯ್ಕೆಯಾಗಿದ್ದಾರೆ (Unopposed Elected) ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿಯಿಂದ (BJP Party) ನಾಮಪತ್ರ ಸಲ್ಲಿಸಿದ್ದ ಚುನ್ನಿಲಾಲ್ ಗರಸಿಯಾ ಮತ್ತು ಮದನ್ ರಾಥೋಡ್ ಕೂಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸಿದ ರಾಜಸ್ಥಾನ ಅಸೆಂಬ್ಲಿ ಕಾರ್ಯದರ್ಶಿ ಮಹಾವೀರ್ ಪ್ರಸಾದ್ ಶರ್ಮಾ ಅವರು ಈ ಘೋಷಣೆಗಳನ್ನು ಮಾಡಿದರು. ರಾಜ್ಯಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಫೆ.20, ಮಂಗಳವಾರ ಕೊನೆಯ ದಿನವಾಗಿತ್ತು. ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಮೂವರು ಮತ್ತು ಬಿಜೆಪಿಯ ಒಬ್ಬ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜತೆಗೆ, ಬಿಜೆಪಿ- ಜೆಡಿಎಸ್ ಜಂಟಿಯಾಗಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹಾಗಾಗಿ, ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.

ರಾಜಸ್ಥಾನದಿಂದ ರಾಜ್ಯಸಭೆಗೆ ಮೂವರು ಚುನಾಯಿತರಾಗಿಬೇಕಾಯಿತು. ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣಕ್ಕೆ, ಸ್ಪರ್ಧೆಯಲ್ಲಿದ್ದ ಮೂವರನ್ನು ವಿಜೇತ ಅಭ್ಯರ್ಥಿಗಳೆಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯರಾದ ಮನಮೋಹನ್ ಸಿಂಗ್ (ಕಾಂಗ್ರೆಸ್) ಮತ್ತು ಭೂಪೇಂದ್ರ ಯಾದವ್ (ಬಿಜೆಪಿ) ಅವರ ಅಧಿಕಾರಾವಧಿಯು ಏಪ್ರಿಲ್ 3 ರಂದು ಕೊನೆಗೊಳ್ಳುತ್ತಿದೆ. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಶಾಸಕರಾಗಿ ಆಯ್ಕೆಯಾದ ನಂತರ ಡಿಸೆಂಬರ್‌ನಲ್ಲಿ ಸದನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ, ಮೂರನೇ ಸ್ಥಾನವು ತೆರವಾಗಿತ್ತು. ರಾಜಸ್ಥಾನ ವಿಧಾನಸಭೆಯ 200 ಸದಸ್ಯರ ಪೈಕಿ ಬಿಜೆಪಿ 115 ಹಾಗೂ ಕಾಂಗ್ರೆಸ್ 70 ಸದಸ್ಯರನ್ನು ಹೊಂದಿದೆ. ರಾಜಸ್ಥಾನದಲ್ಲಿ ಒಟ್ಟು 10 ರಾಜ್ಯಸಭಾ ಸ್ಥಾನಗಳಿದ್ದು, ಈಗ ಕಾಂಗ್ರೆಸ್ 6 ಮತ್ತು ಬಿಜೆಪಿ ನಾಲ್ವರು ಸದಸ್ಯರನ್ನು ಹೊಂದಿದಂತಾಗಿದೆ.

ಈ ಸುದ್ದಿಯನ್ನೂ ಓದಿ: Rajya Sabha Election: ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ; ನಿಜ ಕಾರಣ ಬಿಚ್ಚಿಟ್ಟ ಬಿ.ವೈ. ವಿಜಯೇಂದ್ರ

Exit mobile version