ಜೈಪುರ: ರಾಜಸ್ಥಾನ ರಾಜಕೀಯದಲ್ಲಿ ಭಿನ್ನಮತದ (Rajasthan Congress Crisis) ಕಾವು ತಾರಕಕ್ಕೇರಿದೆ. ಅದರಲ್ಲೂ, ಕಾಂಗ್ರೆಸ್ ಅಧ್ಯಕ್ಷರಾಗಲು ಹೊರಟಿರುವ ಅಶೋಕ್ ಗೆಹ್ಲೋಟ್ ಅವರ ಆಪ್ತರು ಹೂಡಿದ ದಾಳಕ್ಕೆ ಬೇಸತ್ತು ಸೋನಿಯಾ ಗಾಂಧಿ ಅವರೇ ಮಧ್ಯಪ್ರವೇಶಿಸುವಂತಾಗಿದೆ. ಗೆಹ್ಲೋಟ್ ಅವರು ರಾಜೀನಾಮೆ ನೀಡಿದರೆ, ಸಿಎಂ ಸ್ಥಾನದಿಂದ ಕೆಳಗಿಳಿದರೆ ರಾಜೀನಾಮೆ ನೀಡಲು ೯೨ ಶಾಸಕರು ಸಿದ್ಧರಾಗಿ ನಿಂತಿದ್ದು ಹೈಕಮಾಂಡ್‌ಅನ್ನು ಕಂಗೆಡಿಸಿದೆ.
ಅಶೋಕ್ ಗೆಹ್ಲೋಟ್ ಅವರ ಸಂಪುಟದ ಶೇ.೭೦ರಷ್ಟು ಶಾಸಕರು ರಾಜೀನಾಮೆಗೆ ಸಿದ್ಧರಾದ ಕಾರಣ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಜಯ್ ಮಕೇನ್ ಅವರು ರಾಜಸ್ಥಾನ ರಾಜಕೀಯದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಬಂಡಾಯ ಶಾಸಕರ ಪ್ರತಿನಿಧಿಗಳಾದ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಹಾಗೂ ಶಾಂತಿ ಧರಿವಾಲ್ ಅವರ ಜತೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಕೇನ್ ಅವರು ಮುಖ್ಯಮಂತ್ರಿ ಕಚೇರಿಯಲ್ಲಿಯೇ ಸಭೆ ನಡೆಸಿ ಮನವೊಲಿಸಲು ಯತ್ನಿಸಿದ್ದಾರೆ. ಆದರೂ, ಬಂಡಾಯವೇಳಲು ತೀರ್ಮಾನಿಸಿರುವ ಶಾಸಕರು ಹಿಂದಡಿ ಇಡಲು ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದುಬಂದಿದೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಮಧ್ಯೆ ಅಧಿಕಾರಕ್ಕಾಗಿ ಪೈಪೋಟಿ ನಡೆದಿದೆ. ಅದರಲ್ಲೂ, ಪೈಲಟ್ ಅವರು ಮುಖ್ಯಮಂತ್ರಿಯಾಗುವುದು ಗೆಹ್ಲೋಟ್ ಬಣಕ್ಕೆ ಇಷ್ಟವಿಲ್ಲ. ಮತ್ತೊಂದೆಡೆ, ಒಬ್ಬರಿಗೆ ಒಂದೇ ಪದವಿ ಎಂದು ರಾಹುಲ್ ಗಾಂಧಿ ಅವರು ಸ್ಪಷ್ಟಪಡಿಸಿರುವುದು ಸಹ ಗೆಹ್ಲೋಟ್ ಅವರ ದ್ವಿಪದವಿ ಆಸೆ ಕಮರುವಂತೆ ಮಾಡಿದೆ. ಭಿನ್ನಮತಕ್ಕೆ ರಾಹುಲ್ ಹೇಳಿಕೆಯೂ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ | Congress President | ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ಗೆಹ್ಲೋಟ್ ದ್ವಿಪದವಿ ಆಸೆಗೆ ತಣ್ಣೀರೆರಚಿದ ರಾಹುಲ್ ಗಾಂಧಿ