Site icon Vistara News

Congress President | ದಿಲ್ಲಿಯಲ್ಲಿ ಮತ ಚಲಾಯಿಸಿದ ಸೋನಿಯಾ, ಪ್ರಿಯಾಂಕಾ

Congress President

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಕಮಿಟಿ (ಎಐಸಿಸಿ) ಅಧ್ಯಕ್ಷ (Congress President) ಚುನಾವಣೆಗೆ ಮತದಾನ ಶುರುವಾಗಿದ್ದು, ಕಾಂಗ್ರೆಸ್‌ನ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದಿಲ್ಲಿಯ ಪಕ್ಷದ ಕಚೇರಿಯಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಇದೇ ವೇಳೆ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಮ್ಮ ಮತವನ್ನು ಚಲಾಯಿಸಿದರು. ಅಕ್ಟೋಬರ್ 19ರಂದು ಫಲಿತಾಂಶ ಹೊರ ಬೀಳಲಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂಥಪುರ ಸಂಸದ ಶಶಿ ತರೂರ್ ಅವರು ನಡುವೆ ಸ್ಪರ್ಧೆ ಇದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ.

ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬುದು ಗಾಂಧಿ ಕುಟುಂಬದ ಇಚ್ಛೆಯಾಗಿತ್ತು. ಆದರೆ, ರಾಜಸ್ಥಾನ ಶಾಸಕರು ಈ ನಿರ್ಧಾರದ ವಿರುದ್ಧ ಬಂಡೆದ್ದ ಕೂಡಲೇ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಆ ಬಳಿಕ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇದಕ್ಕೂ ಮೊದಲೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಶಶಿ ತರೂರ್ ಅವರು ಘೋಷಿಸಿದ್ದರು. ಈ ಮಧ್ಯೆ, ದಿಗ್ವಿಜಯ್ ಸಿಂಗ್ ಅವರೂ ಸ್ಫರ್ಧಿಸುವುದಾಗಿ ಘೋಷಿಸಿದ್ದರು. ಆದರೆ, ಖರ್ಗೆ ಸ್ಫರ್ಧಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.

ಏತನ್ಮಧ್ಯೆ, ಭಾರತ ಜೋಡೋ ಪಾದಯಾತ್ರೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಮತದಾನವು ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಅಕ್ಟೋಬರ್ 19ರಂದು ಫಲಿತಾಂಶವು ಪ್ರಕಟವಾಗಲಿದೆ. ಗಾಂಧಿ ಕುಟುಂಬದ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.

ಇದನ್ನೂ ಓದಿ |Rahul Gandhi | ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರಂಥ ಪ್ರಭಾವಿ ನಾಯಕರು ಯಾರಿದ್ದಾರೆ? ಖರ್ಗೆ ಪ್ರಶ್ನೆ

Exit mobile version