Site icon Vistara News

Sonia Gandhi: ದೆಹಲಿಯಲ್ಲಿ ವಾಯುಮಾಲಿನ್ಯ; ಜೈಪುರಕ್ಕೆ ಶಿಫ್ಟ್‌ ಆದ ಸೋನಿಯಾ ಗಾಂಧಿ

Sonia Gandhi

Sonia Gandhi shifts to Jaipur To avoid air pollution In Delhi

ಜೈಪುರ: ದೆಹಲಿಯಲ್ಲಿ ದಿನೇದಿನೆ ವಾಯುಮಾಲಿನ್ಯ ಪ್ರಮಾಣವು (Delhi Air Pollution) ಜಾಸ್ತಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ತಾತ್ಕಾಲಿಕವಾಗಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ (Jaipur) ಶಿಫ್ಟ್‌ ಆಗಿದ್ದಾರೆ. ಉಸಿರಾಟ, ಎದೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ವೈದ್ಯರು ಹಾಗೂ ಕುಟುಂಬಸ್ಥರ ಸಲಹೆ ಮೇರೆಗೆ ದೆಹಲಿಯಿಂದ ಜೈಪುರಕ್ಕೆ ಶಿಫ್ಟ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಮಂಗಳವಾರ (ನವೆಂಬರ್‌ 14) ಸಂಜೆ ಜೈಪುರ ತಲುಪಿರುವ ಸೋನಿಯಾ ಗಾಂಧಿ ಅವರು ಇನ್ನೂ ನಾಲ್ಕೈದು ದಿನ ಜೈಪುರದಲ್ಲಿಯೇ ಇರಲಿದ್ದಾರೆ. “ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಜೈಪುರಕ್ಕೆ ಆಗಮಿಸಿದ್ದಾರೆ. ಇನ್ನೂ ಕೆಲವು ದಿನ ಅವರು ಜೈಪುರದಲ್ಲಿಯೇ ಇರಲಿದ್ದಾರೆ. ಹಾಗೆಯೇ, ರಾಹುಲ್‌ ಗಾಂಧಿ ಅವರು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್‌ 15ರಂದು ಜೈಪುರ ಹಾಗೂ ಛತ್ತೀಸ್‌ಗಢದಲ್ಲಿ ಮತ್ತು ನವೆಂಬರ್‌ 16, 19, 21 ಹಾಗೂ 22ರಂದು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಲಿದ್ದಾರೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಮಾಹಿತಿ ನೀಡಿದ್ದಾರೆ.

ರಾಜಸ್ಥಾನ ಸೇರಿ ಹಲವೆಡೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಜೈಪುರಕ್ಕೆ ತೆರಳಿದ್ದು ಆರಂಭದಲ್ಲಿ ಕುತೂಹಲ ಕೆರಳಿಸಿತ್ತು. ಬಳಿಕ, ಅವರು ಆರೋಗ್ಯ ದೃಷ್ಟಿಯಿಂದಾಗಿ ಮಾತ್ರ ಜೈಪುರದಲ್ಲಿ ತಂಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಸ್ಪಷ್ಟನೆ ನೀಡಿದರು. ಸೋನಿಯಾ ಗಾಂಧಿ ಅವರು ದೆಹಲಿ ವಾಯುಮಾಲಿನ್ಯ ಹೆಚ್ಚಾದ ಕಾರಣದಿಂದ 2020ರಲ್ಲೂ ಗೋವಾಗೆ ತೆರಳಿ, ಅಲ್ಲಿ ಕೆಲವು ವಾರ ತಂಗಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ದಿಢೀರ್‌ ಏರುಪೇರಾದ ಕಾರಣ ದೆಹಲಿಯಲ್ಲಿರುವ ಸರ್‌ ಗಂಗಾರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಘು ಜ್ವರದ ಜತೆಗೆ ಸ್ವಲ್ಪ ಎದೆ ನೋವು ಕೂಡ ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು.

ಇದನ್ನೂ ಓದಿ: Sonia Gandhi: ಸೋನಿಯಾ ಗಾಂಧಿಯನ್ನು ಭಾರತ ಮಾತೆಯಂತೆ ಚಿತ್ರಿಸಿದ ಕಾಂಗ್ರೆಸ್;‌ ಬಿಜೆಪಿ ಆಕ್ರೋಶ

ಅಷ್ಟೇ ಅಲ್ಲ, ಪ್ರಸಕ್ತ ವರ್ಷದಲ್ಲಿಯೇ ಸೋನಿಯಾ ಗಾಂಧಿ ಅವರು ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈರಲ್‌ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು 2023ರ ಜನವರಿ 12ರಂದು ಸರ್‌ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 17ರಂದು ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಮಾರ್ಚ್‌ 2ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Exit mobile version