Site icon Vistara News

Women’s Reservation Bill: ಮಹಿಳಾ ಮೀಸಲಾತಿ ಬಿಲ್‌ಗೆ ಸೋನಿಯಾ ಗಾಂಧಿ ಬೆಂಬಲ; ರಾಜೀವ್‌ ಗಾಂಧಿಗೆ ಕ್ರೆಡಿಟ್‌

Sonia Gandhi In Lok Sabha

Sonia Gandhi Supports Women's Reservation Bill In Lok Sabha

ನವದೆಹಲಿ: ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕದ (Women’s Reservation Bill) ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಮಂಡಿಸಿದ ವಿಧೇಯಕಕ್ಕೆ ಬುಧವಾರ (ಸೆಪ್ಟೆಂಬರ್‌ 20) ಕೆಳಮನೆಯಲ್ಲಿ ಅಂಗೀಕಾರ ಸಿಗುವ ನಿರೀಕ್ಷೆ ಇದೆ. ಇನ್ನು ವಿಧೇಯಕ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi), “ಕಾಂಗ್ರೆಸ್‌ ಪರವಾಗಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ” ಎಂದು ಹೇಳಿದರು.

“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ನಾನು ನಾರಿ ಶಕ್ತಿ ವಂದನ್‌ ಅಧಿನಿಯಮ (2023) ವಿಧೇಯಕಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ. ಮಹಿಳಾ ಮೀಸಲಾತಿಯ ರಾಜೀವ್‌ ಗಾಂಧಿ ಅವರ ಕನಸಾಗಿತ್ತು. ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮಸೂದೆ ಮಂಡಿಸಿದರು. ಈಗ ವಿಧೇಯಕ ಮಂಡನೆಯಾಗುವ ಮೂಲಕ ರಾಜೀವ್‌ ಗಾಂಧಿ ಅವರ ಕನಸು ನನಸಾಗುತ್ತಿದೆ” ಎಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಮಹಿಳಾ ಮೀಸಲಾತಿಯ ಶ್ರೇಯಸ್ಸು ನೀಡಿದರು.

“ಭಾರತದ ಮಹಿಳೆಯರು ಸಮುದ್ರದಷ್ಟೇ ಸಹನೆ, ತಾಳ್ಮೆಯನ್ನು ಹೊಂದಿದ್ದಾರೆ. ಅವರು ನದಿಯಂತೆ ದೇಶದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಹಾಗಾಗಿ, ಮಹಿಳೆಯರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ. ಹಾಗೆಯೇ, ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವ ವೇಳೆ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಕೂಡಲೇ ಜಾತಿಗಣತಿ ನಡೆಸಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಒತ್ತಾಯಿಸಿದರು.

ಇದನ್ನೂ ಓದಿ: Women Reservation Bill: ಇಂಡಿಯಾ ಕೂಟದ ನಾಯಕರೇ ಮಹಿಳಾ ಮೀಸಲಾತಿ ಮಸೂದೆಗೆ ತಡೆ ಒಡ್ಡಿದ್ದರು ಎಂದ ಎಚ್‌ಡಿಕೆ

ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಧೇಯಕವನ್ನು ಪರಿಚಯಿಸಿದೆ. ಹೊಸ ಸಂಸತ್ ಭವನದಲ್ಲಿ ನಡೆದ ಕಲಾಪದಲ್ಲಿ ಮಂಡನೆಯಾದ ಮೊದಲ ವಿಧೇಯಕ ಕೂಡ ಇದಾಗಿದೆ. 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಮಹಿಳೆಯ ಸಹಭಾಗಿತ್ವ ಅತಿ ಮುಖ್ಯ. ಈ ಕಾರಣಕ್ಕಾಗಿಯೇ ಅವರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕವನ್ನು ಮಂಡಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಬುಧವಾರ ವಿಧೇಯಕಕ್ಕೆ ಅನುಮೋದನೆ ದೊರೆತರೆ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ.

Exit mobile version