ನವದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Congress Leader Sonia Gandhi) ಅವರು ರಾಜಸ್ಥಾನದ ಮೂಲಕ ರಾಜ್ಯಸಭೆಗೆ (Rajya Sabha Election) ಸ್ಪರ್ಧಿಸಲಿದ್ದಾರೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಪುತ್ರ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಉತ್ತರ ಪ್ರದೇಶದ ರಾಯ್ ಬರೇಲಿ (Rai Bareilly) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಮೂಲಗಳು ತಿಳಿಸಿವೆ. ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಹಾಲಿ ಸಂಸದೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಸೋನಿಯಾ ಗಾಂಧಿ ಅವರು ಕರ್ನಾಟಕದ ಮೂಲಕ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆಂಬ ಸುದ್ದಿಗಳಿದ್ದವು. ಆದರೆ, ಈಗಿನ ಮೂಲಗಳ ಪ್ರಕಾರ ಅವರು ರಾಜಸ್ಥಾನದ ಮೂಲಕ ರಾಜ್ಯಸಭೆಯನ್ನು ಸ್ಪರ್ಧಿಸಲಿದ್ದಾರೆ. ಮತ್ತೊಂದೆಡೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣಾ ರಾಜಕಾರಣಕ್ಕೆ ಪ್ರವೇಶ ಪಡೆಯಲು ಮುಂದಾಗಿದ್ದು, ತಮ್ಮ ತಾಯಿ ಪ್ರತಿನಿಧಿಸುತ್ತಿರುವ ರಾಯ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಅವರು ಸದ್ಯ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ, ಇತ್ತೀಚೆಗೆ ನಡೆದ ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಎರಡೂ ಚುನಾವಣೆಯನ್ನು ಗೆಲ್ಲಿಸುವಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಂದೆಡೆ, ಕೇರಳದ ವಯನಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಹುಲ್ ಗಾಂಧಿ ಅವರು ಮತ್ತೆ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದರಿಂದ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅಮೇಠಿ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ದ ರಾಹುಲ್ ಗಾಂಧಿ ಸೋಲು ಅನುಭವಿಸಿದ್ದರು.
ಕಾಂಗ್ರೆಸ್‌ನಿಂದ ಬಂದ ಆರ್‌ಪಿಎನ್ ಸಿಂಗ್, ಸುಧಾಂಶು ತ್ರಿವೇದಿ ಬಿಜೆಪಿ ಟಿಕೆಟ್ ಪಡೆದ ಪ್ರಮುಖರು
ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ (Rajya Sabha Election) ಭಾರತೀಯ ಜನತಾ ಪಾರ್ಟಿಯು (BJP Party) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ (Karnataka) ಹೊಸ ಮುಖಕ್ಕೆ ಆದ್ಯತೆ ನೀಡಿದಂತೆ, ಹೊರ ರಾಜ್ಯಗಳಲ್ಲೂ ಅದೇ ಪ್ರಯೋಗವನ್ನು ಮಾಡಿ, ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ಆರ್‌ಪಿಎನ್ ಸಿಂಗ್ (RPN Singh) ಅವರನ್ನು ಉತ್ತರ ಪ್ರದೇಶದಿಂದ ಕಣಕ್ಕಿಳಿಸಲಾಗುತ್ತಿದೆ. ಒಟ್ಟು ಉತ್ತರ ಪ್ರದೇಶದಿಂದ 10 ಅಭ್ಯರ್ಥಿಗಳನ್ನು ರಾಜ್ಯ ಸಭೆಗೆ ಕಳುಹಿಸಲು ಅವಕಾಶವಿದ್ದು, ಈ ಪೈಕಿ 7 ಸ್ಥಾನಗಳನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಿಂದ ಆರ್‌ಪಿಎನ್ ಸಿಂಗ್ ಮಾತ್ರವಲ್ಲದೇ, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಚೌಧರಿ ತೇಜ್ವೀರ್ ಸಿಂಗ್, ಸಾಧನಾ ಸಿಂಗ್, ಅಮರ್ ಪಾಲ್ ಮೌರ್ಯ, ಸಂಗೀತಾ ಬಲ್ವಂತ್ ಮ್ತತು ನವೀನ್ ಜೈನ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ವೇಳೆ ಜಾತಿ ಸಮೀಕರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕುರ್ಮಿ, ಬ್ರಾಹ್ಮಣ, ನಿಶಾದ್, ಜೈನ್, ರಜಪೂತ್, ಮೌರ್ಯ ಮತ್ತು ಜಾಟ್ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.
ಈ ಸುದ್ದಯನ್ನೂ ಓದಿ: Rajya Sabha Election: ಕಾಂಗ್ರೆಸ್‌ನ 3, ಬಿಜೆಪಿಯ 1 ರಾಜ್ಯಸಭಾ ಸ್ಥಾನಕ್ಕೆ ಫೆ.27ಕ್ಕೆ ಚುನಾವಣೆ: ಶುರುವಾಗಿದೆ ರಾಜಕೀಯ ಲೆಕ್ಕಾಚಾರ!