Site icon Vistara News

Sonia Gandhi | ಮಗ, ಮಗಳ ಜತೆ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಹೋಗುತ್ತಿರುವುದೇಕೆ?

Sonia

ಹೊಸದಿಲ್ಲಿ: ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಹಾಗೂ ೨೦೨೪ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಸಿದ್ಧವಾಗುತ್ತಿದೆ. ಹಾಗಾಗಿಯೇ, ಸೆಪ್ಟೆಂಬರ್‌ ೪ರಂದು ಬೆಲೆಯೇರಿಕೆ ವಿರುದ್ಧ “ಮೆಹಂಗಾಯಿ ಪರ್‌ ಹಲ್ಲಾ ಬೋಲ್‌” (ಬೆಲೆಯೇರಿಕೆ ವಿರುದ್ಧ ಧ್ವನಿಯೆತ್ತಿ) ಹಾಗೂ ಸೆ.೨೭ರಿಂದ “ಭಾರತ್‌ ಜೋಡೊ” ಅಭಿಯಾನ ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಮೆಡಿಕಲ್‌ ಚೆಕಪ್‌ಗಾಗಿ ಬುಧವಾರ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

“ಮೆಡಿಕಲ್‌ ಚೆಕಪ್‌ಗಾಗಿ ಸೋನಿಯಾ ಗಾಂಧಿ ಅವರು ಬುಧವಾರ ವಿದೇಶಕ್ಕೆ ತೆರಳಲಿದ್ದಾರೆ. ಅವರ ಜತೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರೂ ತೆರಳಲಿದ್ದಾರೆ. ಸೆ.೪ರಂದು ನಡೆಯುವ ಮೆಹಂಗಾಯಿ ಪರ್‌ ಹಲ್ಲಾ ಬೋಲ್‌ ಅಭಿಯಾನದಲ್ಲಿ ರಾಹುಲ್‌ ಗಾಂಧಿ ಅವರು ಭಾಷಣ ಮಾಡಲಿದ್ದಾರೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಮಂಗಳವಾರವಷ್ಟೇ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಅವರು ವಿದೇಶಕ್ಕೆ ತೆರಳುತ್ತಿದ್ದಾರೆ. ಇದು ರೆಗ್ಯುಲರ್‌ ಚೆಕಪ್‌ ಅಷ್ಟೆ ಎಂದು ತಿಳಿದುಬಂದಿದೆ. ಆದಾಗ್ಯೂ, ದೆಹಲಿಗೆ ಆಗಮಿಸುವ ಮುನ್ನ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಅವರ ತಾಯಿಯನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದಷ್ಟೇ ಸೋನಿಯಾ ಗಾಂಧಿ ಅವರಿಗೆ ಕೊರೊನಾ ದೃಢಪಟ್ಟಿತ್ತು. ಹಾಗಾಗಿ, ಅವರು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೆಲವು ದಿನ ಚಿಕಿತ್ಸೆ ಪಡೆದು ಬಳಿಕ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ | ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ; ಆತಂಕ ವ್ಯಕ್ತಪಡಿಸಿದ ಅಶೋಕ್​ ಗೆಹ್ಲೋಟ್​

Exit mobile version