Site icon Vistara News

Sonia Gandhi: ರಾಜೀವ್ ಗಾಂಧಿ ಹತ್ಯೆ ಬಳಿಕ ಹೇಗಿದ್ದೀರಿ… ರೈತ ಮಹಿಳೆಯರ ಪ್ರಶ್ನೆಗೆ ಸೋನಿಯಾ ಏನಂದ್ರು?

Sonia Gandhi

ನವದೆಹಲಿ: ಎಲ್‌ಟಿಟಿಇ ಮಾನವ ಬಾಂಬ್‌‌ಗೆ ರಾಜೀವ್ ಗಾಂಧಿ (Rajiv Gandhi) ಅವರು ಬಲಿಯಾದಾಗ ಅವರ ಪತ್ನಿ ಸೋನಿಯಾ ಗಾಂಧಿ (Sonia Gandhi) ಅವರ ಮನಸ್ಥಿತಿ ಹೇಗಿತ್ತು? ಈ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ, ದಿಲ್ಲಿ ದರ್ಶನಕ್ಕಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಹರ್ಯಾಣದ ರೈತ ಮಹಿಳೆಯರು (Haryana Woman Formers) ಸೋನಿಯಾ ಗಾಂಧಿ ಅವರಿಗೆ, ”ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ನೀವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದಿರಿ” ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ವಿಡಿಯೋ ಕ್ಲಿಪ್ ಅನ್ನು ಕಾಂಗ್ರೆಸ್ (Congress Party) ವಕ್ತಾರೆ ಸುಪ್ರಿಯಾ ಶ್ರೀನಾಥೆ (Supriya Shrinate) ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ.

ರೈತ ಮಹಿಳೆಯರ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ ಅವರು, ”ತುಂಬಾ ದುಃಖದಲ್ಲಿದ್ದೆ” ಎಂದು ಹೇಳುತ್ತಾರಷ್ಟೇ. ಮುಂದೆ ಮಾತನಾಡಲು ಅವರಿಗಾಗುವುದಿಲ್ಲ. ಆಗ ಮಧ್ಯ ಪ್ರವೇಶಿಸುವ ಪ್ರಿಯಾಂಕಾ ಗಾಂಧಿ, ”ಅಮ್ಮ(ಸೋನಿಯಾ) ತುಂಬಾ ದಿನಗಳವೆರಗೂ ಏನೂ ತಿನ್ನಲಿಲ್ಲ ಮತ್ತು ಏನನ್ನೂ ಕುಡಿಯಲೂ ಇಲ್ಲ” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಆಗ ಮತ್ತೊಬ್ಬ ರೈತ ಮಹಿಳೆಯು, ಆಕೆ(ಸೋನಿಯಾ) ತುಂಬಾ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳುತ್ತಾರೆ. ಆಗ ಸೋನಿಯಾ ಗಾಂಧಿ ಅವರು ತಮ್ಮ ತಲೆ ಅಲ್ಲಾಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

21 ನೇ ವಯಸ್ಸಿನಲ್ಲಿ ಅವರು (ಸೋನಿಯಾ) ರಾಜೀವ್ ಅವರ ಪತ್ನಿ ಮತ್ತು ಈ ದೇಶದ ಸೊಸೆಯಾಗಿ ಬಂದರು. ತಮ್ಮ ಜೀವನದ 55 ವರ್ಷಗಳನ್ನು ಇಲ್ಲಿ ಕಳೆದರು. ರಾಜೀವ್ ಅವರ ಪತ್ನಿಯಾಗಿ ಜೀವನದ ಅತ್ಯಂತ ಸುಂದರ 23 ವರ್ಷಗಳನ್ನು ಕಳೆದರು. ಆದರೆ ಅದಕ್ಕಿಂತ ಹೆಚ್ಚಾಗಿ, 32 ವರ್ಷಗಳಿಂದ ಅವರಿಲ್ಲದೇ ವಿಧವೆಯಾಗಿ ಬದಕುತ್ತಿದ್ದಾರೆ. ಈ (ವಿಡಿಯೋ) ನೋಡಿ, ನಾನು ಸ್ವಲ್ಪ ಸಮಯ ಯೋಚಿಸಿದೆ, ಯಾರಾದರೂ ಇಷ್ಟು ಘನತೆಯಿಂದ, ಇಷ್ಟು ಪ್ರೀತಿಯಿಂದ, ಎಷ್ಟು ನೋವು ಅನುಭವಿಸಿದರೂ ಹೇಗೆ ಬದುಕುತ್ತಾರೆ? ಕೋಪವಾಗಲಿ ದ್ವೇಷವಾಗಲಿ ಇರದೇ ಇರಲು ಹೇಗೆ ಸಾಧ್ಯ? ಈ ದೇಶದ ಜನರ ಒಳಿತಿಗಾಗಿ ಮಾತ್ರ ಮಾತನಾಡುವುದು, ಎಷ್ಟು ಸಮರ್ಪಣೆ, ಎಷ್ಟು ತ್ಯಾಗ ಎಂದು ಯೋಚಿಸುತ್ತಿರುವಾಗ ಆಶೀರ್ವಾದದಿಂದ ಮಾತ್ರ ಇದು ಸಾಧ್ಯ. ಈ ದೇಶವು ಯಾವಾಗಲೂ ನಿಮಗೆ ಋಣಿಯಾಗಿರುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯ ಮದುವೆ ಮಾಡಿ; ರೈತ ಮಹಿಳೆ ಸಲಹೆಗೆ ಸೋನಿಯಾ ಗಾಂಧಿ ಹೇಳಿದ್ದೇನು?

ರೈತ ಮಹಿಳೆಯರು ವಿಶೇಷ ವಾಹನದಲ್ಲಿ ಸೋನಿಪತ್‌ ಜಿಲ್ಲೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದರು. ರಾಹುಲ್‌ ಗಾಂಧಿ ಆಹ್ವಾನದ ಮೇರೆಗೆ ಅವರು ಆಗಮಿಸಿದ್ದರು. ರೈತ ಮಹಿಳೆಯರಿಗೆ ಸೋನಿಯಾ ಗಾಂಧಿ ನಿವಾಸದಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇದೇ ವೇಳೆ ರೈತ ಮಹಿಳೆಯರು, ಯುವತಿಯರ ಜತೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಸಂವಾದ ನಡೆಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version