ಶ್ರೀನಗರ: ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದು, ಈಗ ಜಾಗತಿಕ ಮಟ್ಟದಲ್ಲಿ ಹಾಡು ಖ್ಯಾತಿ ಗಳಿಸಿದೆ. ನಟರಾದ ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಮಾಡಿದ ನೃತ್ಯವೂ ಮನ್ನಣೆ ಪಡೆದಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದಲ್ಲಿ ನಡೆದ ಜಿ-20 ಸಭೆಯಲ್ಲೂ (G20 Meeting) ನಾಟು ನಾಟು ಹಾಡಿಗೆ ನಟ ರಾಮ್‌ಚರಣ್ ಸೇರಿ ಹಲವರು ಡಾನ್ಸ್ ಮಾಡಿದ್ದಾರೆ.
ಹೌದು, ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಕಾಶ್ಮೀರದ ಶ್ರೀನಗರದಲ್ಲಿ ಜಿ-20 ಸಭೆ ನಡೆಯುತ್ತಿದೆ. ಇದೇ ವೇಳೆ, ನಟ ರಾಮ್‌ಚರಣ್ ಅವರು ಕೂಡ ಸಭೆಯಲ್ಲಿ ಪಾಲ್ಗೊಂಡು, ಸಿನಿಮಾ ಹಾಗೂ ಪ್ರವಾಸೋದ್ಯಮದ ಕುರಿತು ಮಾತನಾಡಿದರು. ಅಲ್ಲದೆ, ದಕ್ಷಿಣ ಕೊರಿಯಾದ ಭಾರತ ರಾಯಭಾರಿ ಚಾಂಗ್ ಜೇ ಬೋಕ್ ಅವರು ನಾಟು ನಾಟು ಹಾಡಿಗೆ ವೇದಿಕೆ ಮೇಲೆಯೇ ನೃತ್ಯ ಮಾಡಿದರು. ಇವರು ನೃತ್ಯ ಮಾಡಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೋಟೊ, ವಿಡಿಯೊ ಇಲ್ಲಿವೆ
ಇದನ್ನೂ ಓದಿ: G20 Meeting: ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಸಿದ ಅರಬ್ ಇನ್‌ಫ್ಲುಯೆನ್ಸರ್; ಇಲ್ಲಿದೆ ವಿಡಿಯೊ
ಪ್ರವಾಸೋದ್ಯಮದ ಪ್ರಮುಖ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಸಭೆಯನ್ನು ಆಯೋಜಿಸುವ ಮೂಲಕ ಭಾರತವು ತನ್ನ ಹಕ್ಕುದಾರಿಕೆಯನ್ನು ಪ್ರತಿಷ್ಠಾಪಿಸಿದೆ. ಚೀನಾ ಸೇರಿ ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೂ, ಅದ್ಧೂರಿಯಾಗಿ ಸಭೆ ಆಯೋಜಿಸಿ ಕಣಿವೆಯಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ರವಾನಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಸಭೆ ಆರಂಭವಾಗಿದ್ದು, ವಿದೇಶಿ ಗಣ್ಯರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಗಿದೆ.
ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಸಿದ ಅರಬ್ ಇನ್‌ಫ್ಲುಯೆನ್ಸರ್
ಜಿ-20 ಸಭೆಗೂ ಮುನ್ನ ಅರಬ್ ಇನ್‌ಫ್ಲುಯೆನ್ಸರ್ ಆಗಿರುವ ಅಮ್ಜದ್ ತಾಹ ಅವರು ಕಣಿವೆಯಲ್ಲಿ ತಾವು ಸುತ್ತಾಡಿದ ಸ್ಥಳಗಳು, ಮನಸೂರೆಗೊಳಿಸಿದ ಸೌಂದರ್ಯದ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಹಾಗೆಯೇ, “ಇದು ಸ್ವಿಟ್ಜರ್‌ಲ್ಯಾಂಡ್ ಅಥವಾ ಆಸ್ಟ್ರಿಯಾ ಅಲ್ಲ. ಇದು ಭಾರತ, ಜಿ-20 ಸಭೆ ನಡೆಯುವ ಕಾಶ್ಮೀರದ ಸೌಂದರ್ಯವಾಗಿದೆ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಇಲ್ಲಿ ಭೂಮಿಯನ್ನು ಸಂರಕ್ಷಿಸಲಾಗಿದೆ, ಪರಿಸರವನ್ನು ಕಾಪಾಡಲಾಗಿದೆ. ಹವಾಮಾನ ಬದಲಾವಣೆಗೆ ಪರಿಹಾರದ ಮೂರ್ತ ರೂಪವಾಗಿ ಕಣ್ಣೆದುರಿಗಿದೆ” ಎಂದು ಒಕ್ಕಣೆ ಬರೆದಿದ್ದಾರೆ.