ಸಿಯೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್(Lee Jae-myung) ಅವರು ಮಂಗಳವಾರ ಬಂದರು ನಗರವಾದ ಬುಸಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ನಗರದ ಹೊಸ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪತ್ರಕರ್ತರ ಗುಂಪಿನ ಮಧ್ಯೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಜೇ-ಮ್ಯುಂಗ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿದೆ. ಆತ ಜೇ-ಮ್ಯುಂಗ್ಗೆ ಚಾಕುವಿನಿಂದ ದಾಳಿ ಮಾಡಲು ಕಾರಣ ಏನಂಬುದು ಇನಷ್ಟೇ ತಿಳಿದು ಬರಬೇಕಿದೆ. ಜೇ-ಮ್ಯುಂಗ್ ಅವರನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.
59 ವರ್ಷದ ಲೀ ಜೇ-ಮ್ಯುಂಗ್ ಗಾಯಗೊಂಡ ವೇಳೆ ಅಲ್ಲಿದ್ದ ಜನರು ತಕ್ಷಣ ಬಟ್ಟೆಯಿಂದ ಗಾಯಗೊಂಡ ಭಾಗಕ್ಕೆ ರಕ್ತ ಸೋರಿಕೆಯಾಗದಂತೆ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡು ಬಿದ್ದಿರುವ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ Japan Earthquake: ಜಪಾನ್‌ನಲ್ಲಿ ಒಂದೇ ದಿನ 155 ಕಂಪನ, ಸಾವಿನ ಸಂಖ್ಯೆ 24ಕ್ಕೆ
ಜೇ-ಮ್ಯುಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಕಾರಿನ ಕಡೆ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಆಟೋಗ್ರಾಫ್ ಕೇಳುವ ನೆಪದೊಂದಿಗೆ ಬಂದು ಚಾಕುವಿನಿಂದ ಇರಿದಿದ್ದಾನೆ ಎಂದು ಸ್ಥಳೀಯರೊಬ್ಬರು ಇಲ್ಲಿನ ಮಾಧ್ಯಮಕ್ಕೆ ಘಟನೆಯ ವಿವರವನ್ನು ನೀಡಿದ್ದಾರೆ.
“ಇದು ಲೀ ವಿರುದ್ಧದ ಭಯೋತ್ಪಾದಕ ಕೃತ್ಯವಾಗಿದೆ. ಇಂತಹ ಘಟನೆ ಎಂದಿಗೂ ಸಂಭವಿಸಬಾರದು. ಇದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ” ಎಂದು ಲೀ ಅವರ ಡೆಮಾಕ್ರಟಿಕ್ ಪಕ್ಷದ ಸಂಸದ ಕ್ವಾನ್ ಚಿಲ್-ಸಿಯುಂಗ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
“ಲೀ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ, ನಾವು ವೈದ್ಯಕೀಯ ಸಿಬ್ಬಂದಿಯ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ದಾಳಿಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಎಲ್ಲರಿಗೂ ತಿಳಿಯಬೇಕಿದೆ. ಯಾವುದೇ ಸಂದರ್ಭದಲ್ಲೂ ನಮ್ಮ ಸಮಾಜವು ಈ ರೀತಿಯ ಹಿಂಸಾಚಾರವನ್ನು ಸಹಿಸಬಾರದು” ಎಂದು ಸಿಯುಂಗ್ ಒತ್ತಾಯಿಸಿದರು. ದಕ್ಷಿಣ ಕೊರಿಯಾದ ಸುದ್ದಿವಾಹಿನಿ ಚೋಸುನ್ ಇಲ್ಬೊ ಪ್ರಕಾರ, ಲೀ ಅವರ ಗಾಯ ಗಂಭೀರವಾಗಿಲ್ಲ. ರಕ್ತಸ್ರಾವವು ಚಿಕ್ಕದಾಗಿದೆ ಎಂದು ವರದಿ ಮಾಡಿದೆ.