Site icon Vistara News

ನೈಋತ್ಯ ಮುಂಗಾರು ಅಂಡಮಾನ್‌ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ

ನವದೆಹಲಿ: ಕೃಷಿ ಅವಲಂಬಿತ ರಾಷ್ಟ್ರ ಭಾರತಕ್ಕೆ ಮಳೆಯೇ ಅತ್ಯಂತ ಮುಖ್ಯ. ಇಲ್ಲಿ ಮುಂಗಾರು ವಿಳಂಬವಾದರೂ ಕಷ್ಟ. ತುಂಬ ಬೇಗನೇ ಬಂದರೂ ಕಷ್ಟ. ಈ ಬಾರಿ ನೈಋತ್ಯ ಮುಂಗಾರು (Southwest Monsoon) ಎಂದಿಗಿಂತಲೂ ಒಂದು ವಾರ ಮೊದಲೇ ಅಂದರೆ ಸೋಮವಾರ (ಮೇ 16) ಅಂಡಮಾನ್‌-ನಿಕೋಬಾರ್‌ ದ್ವೀಪವನ್ನು ಪ್ರವೇಶಿಸಿದೆ. ಅಲ್ಲದೆ ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲೂ ಮುಂಗಾರು ಪ್ರಾರಂಭವಾಗಿದೆ. ಕಡಿಮೆ ಉಷ್ಣವಲಯದ ಪ್ರದೇಶಗಳಲ್ಲಿ ನೈಋತ್ಯ ಮಾರುತ ಬಲಗೊಳ್ಳುತ್ತಿರುವುದರಿಂದ ಅಂಡಮಾನ್‌ -ನಿಕೋಬಾರ್‌ ದ್ವೀಪ ಮತ್ತು ಅದರ ಸುತ್ತಲಿನ ಭಾಗಗಳಲ್ಲಿ ತುಂಬ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಮಾದರಿಯ ಗಾಳಿ ಪರಿಚಲನೆ ಇರುವುದರಿಂದ ಕೇರಳದ ಕರಾವಳಿ ಪ್ರದೇಶ, ಲಕ್ಷದ್ವೀಪ, ತಮಿಳುನಾಡಿನ ಉತ್ತರ ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳ ಹಲವೆಡೆ ಇನ್ನೂ ನಾಲ್ಕು ದಿನಗಳ ಕಾಲ ಗುಡುಗು-ಮಿಂಚು-ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ, ಕೇರಳ ಸೇರಿ ಹಲವೆಡೆ ತುಂಬ ದಿನಗಳಿಂದಲೂ ಮಳೆಯಾಗುತ್ತಿದೆ. ಅಸಾನಿ ಚಂಡಮಾರುತದ ಪ್ರಭಾವದಿಂದ ಮಳೆಯ ತೀವ್ರತೆ ಹೆಚ್ಚಿತ್ತು. ಅದರ ಬೆನ್ನಲ್ಲೇ ಅಂಡಮಾನ್‌ ನಿಕೋಬಾರ್‌ ದ್ವೀಪಗಳಿಗೆ ನೈಋತ್ಯ ಮಾನ್ಸೂನ್‌ ಪ್ರವೇಶವಾಗಿದೆ. ಹೀಗಾಗಿ ಕೇರಳಕ್ಕೂ ಕೂಡ ಮುಂಚಿತವಾಗಿಯೇ ಅಂದರೆ ಮೇ 27ರ ಸುಮಾರಿಗೆ ಮುಂಗಾರು ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ | Cyclone Asani ದುರ್ಬಲವಾದರೂ ಮೂರ್ನಾಲ್ಕು ದಿನ ಭಾರೀ ಮಳೆ: ಉತ್ತಮ ಮುಂಗಾರಿನ ಮುನ್ಸೂಚನೆ

ಇನ್ನು ಈಶಾನ್ಯ ಅಸ್ಸಾಂ, ಆಗ್ನೇಯ ಮೇಘಾಲಯ, ಅರುಣಾಚಲ ಪ್ರದೇಶ, ಕರ್ನಾಟಕದ ನೈಋತ್ಯ ಭಾಗ ಮತ್ತು ವಾಯುವ್ಯ ಕೇರಳದಲ್ಲಿ ಇಂದು (ಮೇ 17) ಸಿಕ್ಕಾಪಟ್ಟೆ ಮಳೆಯಾಗಬಹುದು ಎಂದು ಐಎಂಡಿ ಹೇಳಿದ್ದು, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಉಳಿದ ಈಶಾನ್ಯ ರಾಜ್ಯಗಳಲ್ಲಿ ಹಳದಿ ಅಲರ್ಟ್‌ ನೀಡಲಾಗಿದೆ.

Early Mansoon: ಈ ಬಾರಿ ಒಂದು ವಾರ ಮೊದಲೇ ಮುಂಗಾರು ಪ್ರವೇಶ?

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಗರಿಷ್ಠ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್‌ ಮೇಲ್ಪಟ್ಟು ಇರುತ್ತಿದೆ. ಆದರೆ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಉಷ್ಣತೆ 41 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಸಂಜೆ ಹೊತ್ತಿಗೆ ಗುಡುಗು ಮತ್ತು ಮಿಂಚು ಇರಬಹುದು ಎಂದೂ ಹೇಳಿದೆ. ಮೇ 22ರ ಹೊತ್ತಿಗೆ ಗರಿಷ್ಠ ಉಷ್ಣತೆ ಮಟ್ಟ 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದೂ ತಿಳಿಸಿದೆ.

ಇದನ್ನೂ ಓದಿ | Heat Wave | ಉತ್ತರ ಭಾರತದಲ್ಲಿ 50 ಡಿಗ್ರಿ ಸನಿಹ ತಲುಪಿದ ಉಷ್ಣತೆ; ಜನರು ಹೈರಾಣ

Exit mobile version