Site icon Vistara News

Monsoon 2024: ಬಿಸಿಲು, ಬರ ಎಂಬ ಚಿಂತೆ ಬೇಡ; ಈ ಬಾರಿ ಮುಂಗಾರು ಮಳೆ ಭರ್ಜರಿ!

Monsoon 2024

Monsoon 2024 to arrive in Kerala on May 31, predicts Met department

ನವದೆಹಲಿ: ದೇಶಾದ್ಯಂತ ಮಳೆ ಕೊರತೆ, ತೀವ್ರ ಬರಗಾಲದಿಂದಾಗಿ ಜನ, ಜಾನುವಾರುಗಳಿಗೆ ನೀರಿಲ್ಲದೆ ತೊಂದರೆಯಾಗಿದೆ. ಕರ್ನಾಟಕದಲ್ಲಂತೂ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರು ನಿತ್ಯವೂ ಮಳೆಗಾಗಿ ಆಕಾಶ ನೋಡುವಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಇದರ ಮಧ್ಯೆಯೇ, ದೇಶದ ಹವಾಮಾನ ಇಲಾಖೆಯು (Meteorological Department) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದೆ. ಈ ಬಾರಿ ಮುಂಗಾರು ಮಳೆಯು (Monsoon 2024) ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶಾದ್ಯಂತ ಶೇ.106ರಷ್ಟು ಮಳೆಯಾಗಲಿದೆ. ಇದು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಎಲ್‌ ನಿನೋ ಪರಿಣಾಮದ ತೀವ್ರತೆಯು ಕಡಿಮೆಯಾಗಿರುವ ಕಾರಣ ಜೂನ್‌ನಿಂದಲೇ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ. ಅದರಲ್ಲೂ, ಜೂನ್‌ 1ರಂದು ಕೇರಳದ ಮೂಲಕ ಪ್ರವೇಶಿಸುವ ಮುಂಗಾರು, ಕೆಲವೇ ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆಯು ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಮುಂಗಾರು ಪ್ರವೇಶಕ್ಕೂ 45 ದಿನಗಳ ಮೊದಲು ವರದಿ ನೀಡಿದೆ. ಸುದೀರ್ಘ ಅವಧಿಯ ಸರಾಸರಿ (Long Period Average) ಆಧಾರದ ಮೇಲೆ ಹವಾಮಾನ ಇಲಾಖೆಯು ಮಳೆಯ ಪ್ರಮಾಣವನ್ನು ಅಂದಾಜಿಸುತ್ತದೆ. ಎಲ್‌ಪಿಎ ಪ್ರಕಾರ ಶೇ.105-110ರಷ್ಟು ಮಳೆಯಾದರೆ, ಅದನ್ನು ವಾಡಿಕೆಗಿಂತ ಹೆಚ್ಚಿನ ಮಳೆ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕದಲ್ಲಿ ನಾಳೆ ಎಲ್ಲೆಲ್ಲಿ ಮಳೆ?

ರಾಜ್ಯಾದ್ಯಂತ ಸೋಮವಾರ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.16ರಿಂದ ಮಲೆನಾಡಿನಾದ್ಯಂತ ಮಳೆಯಾಗುವ ನಿರೀಕ್ಷೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮುಂದುವರಿಯಲಿದೆ. ಹೀಗಾಗಿ ಬಿಸಿ ತಾಪಮಾನ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಏ.17ರ ವರೆಗೂ ಮಳೆ ಆರ್ಭಟ;‌ ಗುಡುಗು, ಸಿಡಿಲು ಸಾಥ್

Exit mobile version