Site icon Vistara News

ಇನ್ನೆರಡು ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಪ್ರವೇಶಿಸಲಿದೆ ನೈಋತ್ಯ ಮುಂಗಾರು

Weather Forecast

ನವದೆಹಲಿ: ನೈಋತ್ಯ ಮಾನ್ಸೂನ್‌ ಮುಂದಿನ ಎರಡು ದಿನಗಳಲ್ಲಿ ಗೋವಾ, ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರಪ್ರದೇಶಕ್ಕೆ ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರ್ನಾಟಕದ ಕರಾವಳಿ ತೀರ ಪ್ರವೇಶಿಸಿರುವ ಮಾನ್ಸೂನ್‌ ರಾಜ್ಯದ ದಕ್ಷಿಣ ಒಳನಾಡಿನ ಭಾಗಗಳಿಗೆ ಆವರಿಸಲು ಅನುಕೂಲಕರ ಸನ್ನಿವೇಶ ಇದೆ. ಇದರೊಂದಿಗೆ ತಮಿಳುನಾಡು, ಮಧ್ಯ ಅರೇಬಿಯನ್‌ ಸಮುದ್ರ, ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿ ಪ್ರದೇಶಗಳ ಹೆಚ್ಚಿನ ಭಾಗಗಳಿಗೆ ನೈಋತ್ಯ ಮಾನ್ಸೂನ್‌ ಲಗ್ಗೆಯಿಡಬಹುದು ಎಂದೂ ಐಎಂಡಿ ವಿವರಿಸಿದೆ. ಕರ್ನಾಟಕದಲ್ಲಿ ಕರಾವಳಿ ತೀರದ ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆಯಾಗಬಹುದು ಮತ್ತು ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಪ್ರದೇಶಗಳಲ್ಲೂ ಚದುರಿದ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ ಈಗಾಗಲೇ ರೂಪುಗೊಂಡಿದೆ. ಇದು ಮುಂಗಾರು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಆರ್‌.ಕೆ.ಜೇನಾಮನಿ ತಿಳಿಸಿದ್ದಾರೆ. ʼಮುಂಗಾರು ಮಾರುತ ಹಂತಹಂತವಾಗಿ ಚಲನೆಯಾಗುತ್ತದೆ. ಒಮ್ಮೊಮ್ಮೆ ನಿಧಾನವಾಗಿ ಚಲಿಸಿದರೆ, ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತದೆ. ಮಾನ್ಸೂನ್‌ ನಿಧಾನವಾಗಿ ಚಲಿಸುತ್ತಿದೆ ಎಂದಾಕ್ಷಣ ಅದು ದುರ್ಬಲಗೊಂಡಿದೆ ಎಂದು ಅರ್ಥವಲ್ಲ ಎಂದು ವಿವರಿಸಿದ್ದಾರೆ. ಸದ್ಯ ಕರ್ನಾಟಕದಲ್ಲೂ ಮುಂಗಾರು ಚಲನೆ ಸ್ವಲ್ಪ ನಿಧಾನಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ವೇಗಪಡೆದುಕೊಳ್ಳಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರಿನ ಅಬ್ಬರ ಹೆಚ್ಚುವ ನಿರೀಕ್ಷೆ, 4 ದಿನ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಟ್

ಮೇಘಾಲಯ, ಅಸ್ಸಾಂನಲ್ಲಿ ವಿಪರೀತ ಮಳೆ
ಇನ್ನೊಂದೆಡೆ ಮೇಘಾಲಯ, ಆಸ್ಸಾಂನಲ್ಲಿ ಇನ್ನೂ ಐದು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅರುಣಾಚಲ ಪ್ರದೇಶದಲ್ಲಿ ಜೂ.10-11ರಂದು ಭಾರಿ ಪ್ರಮಾಣದಲ್ಲಿ ಅಂದರೆ 204 ಎಂಎಂ ಗೂ ಅಧಿಕ ಮಳೆಯಾಗಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇಘಾಲಯದಲ್ಲಿ ಈಗಾಗಲೇ ಭೀಕರ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹ ಪರಿಸ್ಥಿತಿ ಇದೆ.

ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ನಲುಗಿದ ಮೇಘಾಲಯ, ನೋಡನೋಡುತ್ತಿದ್ದಂತೆ ಕೊಚ್ಚಿ ಹೋದ ಸೇತುವೆ

Exit mobile version