ಲಖನೌ: ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಸಂಗಮ್ ಯಾದವ್ (SP leader Sangam Yadav)ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಾನೊಬ್ಬ ರಾಜಕೀಯ ನಾಯಕ ಎಂಬ ದರ್ಪದಲ್ಲಿ ಆಟೋ ಮೊಬೈಲ್ ಸರ್ವೀಸ್ ಸೆಂಟರ್ನಲ್ಲಿನ ಕೆಲಸಗಾರರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಸಂಗಮ್ ಬಂಧಿತರಾಗಿದ್ದಾರೆ. ಅವರು ಆಟೋ ಮೊಬೈಲ್ ಸರ್ವೀಸ್ ಸೆಂಟರ್ನ ಕಾರ್ಮಿಕರಿಗೆ ಗಂಭೀರ ಸ್ವರೂಪದ ಬೆದರಿಕೆ ಹಾಕಿದ ಆಡಿಯೋ ಕೂಡ ವೈರಲ್ ಆಗುತ್ತಿದೆ.
ಸಂಗಮ್ ಯಾದವ್ರ ಸ್ವಿಫ್ಟ್ ಕಾರು ಸಣ್ಣ ಪ್ರಮಾಣದ ಅಪಘಾತಕ್ಕೀಡಾಗಿ ಅದರಲ್ಲಿ ಕೆಲ ಭಾಗಗಳು ಹಾಳಾಗಿದ್ದವು. ಅದನ್ನು ದುರಸ್ತಿಗೆಂದು ಅವರು ಉತ್ತರ ಪ್ರದೇಶದ ದೇವರಿಯಾದಲ್ಲಿರುವ ಕ್ಲಾಸಿಕ್ ಮೋಟಾರ್ಸ್ ಎಂಬ ಆಟೋಮೊಬೈಲ್ ಶಾಪ್ಗೆ ಕಳಿಸಿದ್ದರು. ಅಲ್ಲಿ ಹೋಗಿ ಸಂಗಮ್ ಯಾದವ್ ದರ್ಪ ತೋರಿಸಿದ್ದಾರೆ. ‘ಅಖಿಲೇಶ್ ಯಾದವ್ ಸರ್ಕಾರ ಆಡಳಿತದಲ್ಲಿ ಇಲ್ಲದೆ ಇರಬಹುದು. ಆದರೆ ನಾನು ಈಗಲೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ. ನನ್ನ ಕಾರನ್ನು ಒಂದೊಮ್ಮೆ ದುರಸ್ತಿ ಮಾಡದೆ ಇದ್ದರೆ, ಇಲ್ಲಿನ ಎಲ್ಲ ಕೆಲಸಗಾರರನ್ನೂ ಕಾರಿನಲ್ಲಿ ಕೂರಿಸಿ, ಆ ಕಾರನ್ನು ಸ್ಫೋಟಿಸುತ್ತೇನೆ’ ಎಂದು ಹೇಳಿದ್ದಾರೆ.
ಕಾರು ಅಪಘಾತಕ್ಕೀಡಾದಾಗ ಅದರ ಇನ್ಶೂರೆನ್ಸ್ ಮಾಡಿದ್ದ ಕಂಪನಿ ವಾಹನವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ, ಅದರ ಮುಂಭಾಗವನ್ನು ದುರಸ್ತಿ ಮಾಡಲು ಮಾತ್ರ ವಿಮೆ ಅನ್ವಯ ಆಗುತ್ತದೆ ಎಂದು ಹೇಳಿತ್ತು. ಆದರೆ ಸಂಗಮ್ ಯಾದವ್ ಇಡೀ ಕಾರಲ್ಲಿ ಎಲ್ಲೆಲ್ಲಿ ಏನೆಲ್ಲ ಹಾಳಾಗಿದೆಯೋ ಅದೆಲ್ಲವನ್ನೂ ದುರಸ್ತಿ ಮಾಡಬೇಕು ಎಂದು ಆಟೋ ಮೊಬೈಲ್ ಶಾಪ್ಗೆ ಹೇಳಿದ್ದಾರೆ. ಅಂದರೆ ಕೇವಲ ಮುಂಭಾಗವನ್ನು ಬದಲಿಸಲು ಇನ್ಶೂರೆನ್ಸ್ ಕಂಪನಿ ನೀಡುವ ಹಣದಲ್ಲೇ, ಕಾರಿನ ಇತರ ಭಾಗಗಳನ್ನೂ ಸರಿಪಡಿಸಬೇಕು ಎಂಬುದು ಅವರ ಆಗ್ರಹ.
‘ಇಲ್ಲ, ಹಾಗೆಲ್ಲ ವಿಮೆ ಅನ್ವಯ ಆಗುವುದೇ ಇಲ್ಲ’ ಎಂದು ಇನ್ಶೂರೆನ್ಸ್ ಏಜೆನ್ಸಿಯ ಸೇವಾ ಸಲಹೆಗಾರ ವಿಕ್ರಮ್ ಪಟೇಲ್ ಅವರು ಸಂಗಮ್ ಯಾದವ್ಗೆ ಕರೆ ಮಾಡಿ ಹೇಳುತ್ತಿದ್ದಂತೆ ಅವರನ್ನೂ ಯಾದವ್ ನಿಂದಿಸಿದ್ದಾರೆ. ಒಮ್ಮೆಲೇ ಕೋಪಗೊಂದು ಬೈದಾಡಿದ್ದಾರೆ. ‘1 ಲಕ್ಷ ರೂಪಾಯಿಯನ್ನು ಕಳಿಸುವಂತೆ ನಿನ್ನ ಬಾಸ್ಗೆ (ಇನ್ಶೂರೆನ್ಸ್ ಕಂಪನಿಯ ಮುಖ್ಯಸ್ಥ) ಹೇಳು. ಕಳಿಸದೆ ಇದ್ದರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ವಿಕ್ರಮ್ ಪಟೇಲ್ಗೂ ಬೆದರಿಕೆ ಹಾಕಿದ್ದರು. ಇದರಿಂದ ಬೇಸರಗೊಂಡ ಪಟೇಲ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದೇ ವೇಳೆ ಆಟೋ ಮೊಬೈಲ್ ಸರ್ವೀಸ್ ಸೆಂಟರ್ ಸಿಬ್ಬಂದಿ ಕೂಡ ಯಾದವ್ ವಿರುದ್ಧ ಆರೋಪ ಮಾಡಿದ್ದರು.
ಇದನ್ನೂ ಓದಿ: Uttar Pradesh Politics | ಅಖಿಲೇಶ್ ಯಾದವ್-ಕೇಶವ್ ಪ್ರಸಾದ್ ಮೌರ್ಯ ಮಧ್ಯೆ ‘100 ಶಾಸಕರ’ ವಾಗ್ವಾದ