ಲಖನೌ: ದೇಶದಲ್ಲಿ ದ್ವೇಷ ಭಾಷಣ (Hate Speech) ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಎಲ್ಲ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರ ಬೆನ್ನಲ್ಲೇ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ (Azam Khan) ಅವರು ದೋಷಿ ಎಂದು ಉತ್ತರ ಪ್ರದೇಶದ ರಾಮ್‌ಪುರ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೂರು ವರ್ಷ ಜೈಲು ಶಿಕ್ಷೆಯಾದ್ದರಿಂದ ಅವರು ಸಂಸತ್ ಸದಸ್ಯ ಸ್ಥಾನವನ್ನೂ ಕಳೆದು ಕೊಳ್ಳುವ ಸಾಧ್ಯತೆ ಇದೆ.
ಅಜಂ ಖಾನ್ ಅವರು 2019ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಗಿನ ಜಿಲ್ಲಾ ದಂಡಾಧಿಕಾರಿ (District Magistrate) ಔಂಜನೇಯ ಕುಮಾರ್ ಸಿಂಗ್ ಅವರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣ ಇದಾಗಿದೆ. ಸದ್ಯ ವಂಚನೆ ಪ್ರಕರಣದಲ್ಲಿ ಅಜಂ ಖಾನ್ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣವು ಅವರಿಗೆ ಉರುಳಾಗಿದೆ. ವಂಚನೆ ಪ್ರಕರಣದಲ್ಲಿ ಈಗಾಗಲೇ ಅವರು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ, ವಂಚನೆ ಸೇರಿ ಸುಮಾರು 90 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ | Hate Speech | ಕ್ರಮ ತೆಗೆದುಕೊಳ್ಳಿ, ಇಲ್ಲ ನ್ಯಾಯಾಂಗ ನಿಂದನೆ ಎದುರಿಸಿ, ದ್ವೇಷ ಭಾಷಣ ಕುರಿತು ಸುಪ್ರೀಂ ಗರಂ