ನವದೆಹಲಿ: ಸಮಾಜವಾದಿ ಪಕ್ಷದ (SP) ನಾಯಕ ಸ್ವಾಮಿ ಪ್ರಾಸ್ ಮೌರ್ಯ (Swami Prasad Maurya) ಅವರಿಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ವಿವಾದಾತ್ಮಕ ಹೇಳಿಕೆ, ಭಾಷಣಗಳಿಂದಲೇ ಸುದ್ದಿಯಲ್ಲಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರೀಗ ಹಿಂದು ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತದೆ. “ಹಿಂದು ಧರ್ಮವು (Hindu Dharma) ಧರ್ಮವೇ ಅಲ್ಲ. ಅದೊಂದು ಮೋಸ” ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿರುವುದು ಭಾರಿ ಟೀಕೆಗೆ ಗುರಿಯಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹಿಂದು ಧರ್ಮದ ಕುರಿತು ಪ್ರಸ್ತಾಪಿಸಿದರು. “ಹಿಂದು ಎಂಬುದು ಒಂದು ಧರ್ಮವೇ ಅಲ್ಲ. ಅದೊಂದು ಮೋಸ, ಕೆಲವರಿಗೆ ಅದು ದಂಧೆಯಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಹಿಂದು ಧರ್ಮ ಎಂಬುದು ಇಲ್ಲ. ಇದೊಂದು ಜೀವನ ವಿಧಾನ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಿಂದು ಧರ್ಮ ಎಂಬುದು ಇಲ್ಲ ಎಂದಿದ್ದಾರೆ. ಹಾಗಾಗಿ, ಹಿಂದು ಎಂಬುದು ಮೋಸ” ಎಂದು ಸಮಾಜವಾದಿ ಪಕ್ಷದ ನಾಯಕ ಹೇಳಿದ್ದಾರೆ.
#WATCH | Delhi: Samajwadi Party leader Swami Prasad Maurya says, "Hindu ek dhokha hai…RSS Chief Mohan Bhagwat has said twice that there is no religion called Hindu but instead, it is a way of living. Prime Minister Modi has also said that there is no Hindu religion…Sentiments… pic.twitter.com/1qnULH1rqt
— ANI (@ANI) December 26, 2023
“ಹಿಂದು ಧರ್ಮ ಇಲ್ಲ ಎಂಬುದಾಗಿ ನರೇಂದ್ರ ಮೋದಿ, ಮೋಹನ್ ಭಾಗವತ್ ಹೇಳಿದರೆ ಅದು ವಿವಾದ ಆಗುವುದಿಲ್ಲ. ಆದರೆ, ಹಿಂದು ಧರ್ಮ ಇಲ್ಲ ಎಂಬುದಾಗಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರೆ ಅದು ಜನರ ಭಾವನೆಗಳಿಗೆ ಧಕ್ಕೆ ಮಾಡಿದ ಹಾಗೆ ಆಗುತ್ತದೆ” ಎಂದರು. “ದಲಿತರು, ಒಬಿಸಿಯವರು ಹಿಂದುಗಳು ಎಂದಾದರೆ, ಅವರಿಗೆ ಅಧಿಕಾರವನ್ನೇಕೆ ನೀಡುವುದಿಲ್ಲ. ನಾವೆಲ್ಲ ಹಿಂದುಗಳಾಗಿದ್ದರೆ, ನಮಗೆ ನೀಡಿದ ಮೀಸಲಾತಿಯನ್ನು ಅವರು ತೆಗೆಯುತ್ತಿರಲಿಲ್ಲ. ಹಾಗಾಗಿ, ಹಿಂದು ಎಂಬುದೇ ಮೋಸ” ಎಂದು ಹೇಳಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದ್ದು, ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: Hijab Row: ಹಿಜಾಬ್ ವರ್ಸಸ್ ಕೇಸರಿ ಶಾಲು! ಸಿಡಿದ ಹಿಂದುಗಳು; ಶುರುವಾಗುತ್ತಾ ಧರ್ಮ ದಂಗಲ್?
ರಾಮಚರಿತಮಾನಸ ಕುರಿತೂ ವಿವಾದಾತ್ಮಕ ಹೇಳಿಕೆ
ಹಿಂದುಗಳ ಪವಿತ್ರ ಗ್ರಂಥವಾದ ರಾಮಚರಿತಮಾನಸ ಗ್ರಂಥದ ಬಗ್ಗೆಯೂ ಕೆಲ ತಿಂಗಳ ಹಿಂದೆ ಸ್ವಾಮಿ ಪ್ರಸಾದ್ ಮೌರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಟೀಕೆಗೆ ಕಾರಣವಾಗಿತ್ತು. “ರಾಮಚರಿತಮಾನಸದ ಕೆಲವು ಪದ್ಯಗಳು ಸಮಾಜದಲ್ಲಿ ತಾರತಮ್ಯವನ್ನು ಬೋಧಿಸುತ್ತವೆ” ಎಂದು ಸ್ವಾಮಿ ಪ್ರಸಾದ ಮೌರ್ಯ ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. “ಜಾತಿಯಾಧಾರದ ಮೇಲೆ ಸಮಾಜದ ಬಹುದೊಡ್ಡ ವರ್ಗಕ್ಕೆ ಅವಮಾನ ಮಾಡುವಂತಿವೆ. ಹಾಗಾಗಿ, ರಾಮಚರಿತಮಾನಸವನ್ನು ನಿಷೇಧಿಸಬೇಕು” ಎಂದು ಅವರು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ