ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯು (Bharat Jodo Nyay Yatra) ಉತ್ತರ ಪ್ರದೇಶವನ್ನು (Uttar Pradesh) ಪ್ರವೇಶಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷಕ್ಕೆ (Congress Party) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ (SP Leader Akhilesh Yadav) ಅವರು ಶಾಕ್ ನೀಡಿದ್ದಾರೆ. ಇಂಡಿಯಾ ಕೂಟದ (INDIA Bloc) ಭಾಗವಾಗಿ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೀಟು ಹಂಚಿಕೆಯನ್ನು ಪೂರ್ಣಗೊಳಿಸದ ಹೊರತು ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಯಾತ್ರೆಯು ಸೋಮವಾರ ಅಮೇಠಿ ಪ್ರವೇಶಿಸಿದ್ದು, ಮಂಗಳವಾರ ರಾಯಬರೇಲಿ ಪ್ರವೇಶಿಸಲಿದೆ. ಈ ವೇಳೆ, ಅಖಿಲೇಶ್ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗಿತ್ತು.
LIVE: Public Address | Amethi | Uttar Pradesh | #BharatJodoNyayYatrahttps://t.co/BYEJwcbdn5
— Bharat Jodo Nyay Yatra (@bharatjodo) February 19, 2024
ಇಂಡಿಯಾ ಕೂಟದ ಸೀಟು ಹಂಚಿಕೆ ಸೂತ್ರದ ಭಾಗವಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಂಗ್ರೆಸ್‌ಗೆ 17 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ. ಸಮಾಜವಾದಿ ಪಕ್ಷವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಪಕ್ಷದ ಕಡೆಯಿಂದ ಈ ಪ್ರಸ್ತಾಪದ ಬಗ್ಗೆ ತಿಳಿಸಲಾಗಿದೆ, ಆದರೆ ಈ ಪ್ರಸ್ತಾಪದ ಬಗ್ಗೆ ಕಾಂಗ್ರೆಸ್ ಇನ್ನೂ ಉತ್ತರಿಸಿಲ್ಲ. ಇದಕ್ಕೂ ಮೊದಲು ಕಾಂಗ್ರೆಸ್‌ಗೆ ಎಸ್‌ಪಿ ಕೇವಲ 11 ಸೀಟು ಬಿಟ್ಟುಕೊಡುವ ಬಗ್ಗೆ ಮಾತನಾಡಿತ್ತು.
ನಾವು ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳ ಅಂತಿಮ ಪ್ರಸ್ತಾಪವನ್ನು ನೀಡಿದ್ದೇವೆ. ಮಂಗಳವಾರ ರಾಯ್ಬರೇಲಿಯಲ್ಲಿ ನಡೆಯುವ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಭಾಗವಹಿಸುವುದು ಅವರ ಸ್ವೀಕಾರವನ್ನು ಅವಲಂಬಿಸಿರುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಪಿಟಿಐಗೆ ತಿಳಿಸಿದ್ದಾರೆ. ಆದರೆ, ಈ 17 ಕ್ಷೇತ್ರಗಳು ಯಾವವು ಎಂಬುದನ್ನು ಅವರು ತಿಳಿಸಲಿಲ್ಲ.
ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಸೋಮವಾರ ಅಮೇಠಿ ಪ್ರವೇಶಿಸಿತು. ಮಂಗಳವಾರ ರಾಯ್ ಬರೇಲಿಗೆ ಪ್ರವೇಶಿಸಲಿದೆ. ಈ ವೇಳೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪಾಲ್ಗೊಳ್ಳಬೇಕಿತ್ತು. ಈ ಮಧ್ಯೆ, ಎಸ್‌ಪಿಯ 11 ಕ್ಷೇತ್ರಗಳ ಆಫರ್ ತಿರಸ್ಕರಿಸಿದ್ದ ರಾಜ್ಯ ಕಾಂಗ್ರೆಸ್ ಘಟಕವು ಇನ್ನೂ ಹೆಚ್ಚಿನ ಕ್ಷೇತ್ರಗಳಿಗೆ ಒತ್ತಾಯಿಸಿತ್ತು.
ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅಜಯ್ ರಾಯ್, 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಗೆದ್ದಿದ್ದ ಸುಮಾರು ಎರಡು ಡಜನ್ ಸ್ಥಾನಗಳನ್ನು ಪಡೆಯಬೇಕು ಎಂದು ಈ ಹಿಂದೆ ಹೇಳಿದ್ದರು. ಆದರೆ, ಇದಕ್ಕೆ ಸಮಾಜವಾದಿ ಪಕ್ಷವು ತನ್ನ ಒಪ್ಪಿಗೆಯನ್ನು ನೀಡಿಲ್ಲ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷವು ಪ್ರತಿಪಕ್ಷಗಳ ರಚಿಸಿರುವ ಇಂಡಿಯಾ ಕೂಟದ ಭಾಗವಾಗಿವೆ.
ಈ ಸುದ್ದಿಯನ್ನೂ ಓದಿ: INDIA Bloc: ಪಂಜಾಬ್, ಚಂಡೀಗಢದಲ್ಲಿ ಸ್ಪತಂತ್ರ ಸ್ಫರ್ಧೆ ಎಂದ ಕೇಜ್ರಿವಾಲ್; ಇಂಡಿಯಾ ಕೂಟ ಛಿದ್ರ