Site icon Vistara News

Akhilesh Yadav : ಎಸ್ಪಿಗೆ 65 ಸ್ಥಾನ, ಮಿತ್ರಪಕ್ಷಗಳಿಗೆ ಉಳಿದ 15 ಕ್ಷೇತ್ರ ಎಂದ ಅಖಿಲೇಶ್!

Akhilesh yadav

ಲಕ್ನೋ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೆಡ್ಡು ಹೊಡೆಯಲೆಂದು ರಚನೆ ಮಾಡಿರುವ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯವೇ ಹೆಚ್ಚು ಎಂಬುದು ಪದೇಪದೆ ಸಾಬೀತಾಗುತ್ತಿದೆ. ನಾನು ಹೇಳಿದ್ದೇ ಸರಿ ಎಂದು ಸದಸ್ಯ ಪಕ್ಷಗಳ ಪ್ರತಿಯೊಬ್ಬ ನಾಯಕನೂ ಹೇಳುತ್ತಿರುವುದರಿಂದ ಚುನಾವಣೆಗೆ ಮೊದಲೇ ಒಕ್ಕೂಟ ದುರ್ಬಗೊಂಡಂತೆ ಕಾಣುತ್ತಿದೆ. ಇದೀಗ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್ (Akhilesh Yadav) ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಒಟ್ಟು 80 ಸ್ಥಾನಗಳಲ್ಲಿ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು 15 ಸ್ಥಾನಗಳನ್ನು ಮಾತ್ರ ಮೈತ್ರಿ ಪಾಲುದಾರರಿಗೆ ಬಿಟ್ಟುಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಿಲ್ಲ ಎಂಬುದು ಖಾತ್ರಿಯಾಗಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧ ಸ್ಪರ್ಧಿಸಲು 28 ಪಕ್ಷಗಳ ನಾಯಕರು ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್​ಕ್ಲುಸಿವ್​ ಅಲೈಯನ್ಸ್ (ಇಂಡಿಯಾ) ವನ್ನು ಘೋಷಿಸಲಾಗಿದೆ. ಉತ್ತರಪ್ರದೇಶದಲ್ಲಿ ಎಸ್ಪಿ, ಕಾಂಗ್ರೆಸ್, ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ) ಮತ್ತು ಅಪ್ನಾ ದಳ (ಕೆ) ಈ ಒಕ್ಕೂಟದ ನಾಲ್ಕು ಪಕ್ಷಗಳಿವೆ. ಮೂರು ಪಕ್ಷಗಳಿಗೆ ಕೇವಲ 15 ಸೀಟ್ ಮಾತ್ರ ಬಿಟ್ಟುಕೊಡುತ್ತೇವೆ ಎಂಬುದಾಗಿ ಅಖಿಲೇಶ್ ಯಾದವ್​ ಇದೀಗ ಹೇಳಿದೆ.

“ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಎಸ್ಪಿ ಸಿದ್ಧವಾಗಿದೆ. ಒಂದು ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿದರೆ ಎಸ್ಪಿ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅಖಿಲೇಶ್ ಹೇಳಿದ್ದಾರೆ. ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ರಚಿಸಲಾದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಮೊದಲ ಸಭೆಯನ್ನುದ್ದೇಶಿಸಿ ಯಾದವ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

“ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಸೋಲಿಸಲು ಎಸ್ಪಿ ಸಂಪೂರ್ಣ ಸಮರ್ಥವಾಗಿದೆ. ರಾಜ್ಯದಲ್ಲಿ ಚುನಾವಣೆಯಲ್ಲಿ ಅಪ್ರಾಮಾಣಿಕತೆ ಇಲ್ಲದಿದ್ದರೆ, 2022 ರ ಯುಪಿ ವಿಧಾನಸಭಾ ಚುನಾವಣೆಯ ನಂತರ ಎಸ್ಪಿ ಸರ್ಕಾರ ರಚಿಸುತ್ತಿತ್ತು. ಆದ್ದರಿಂದ, ಲೋಕಸಭಾ ಚುನಾವಣೆಯಲ್ಲಿ ಅಪ್ರಾಮಾಣಿಕತೆಯ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಪಕ್ಷವು ಸಂಪೂರ್ಣ ಸಜ್ಜಾಗಿದೆ ” ಎಂದು ಯಾದವ್ ಸಭೆಯಲ್ಲಿ ಪಕ್ಷದ ಮೂಲಗಳಿಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದ ಗಲಾಟೆಯ ಪರಿಣಾಮ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಎಸ್​ಪಿಗೆ ಯಾವುದೇ ಸ್ಥಾನಗಳನ್ನು ಬಿಟ್ಟುಕೊಡದ ನಂತರ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ಎಸ್ಪಿ ಆರೋಪಿಸಿತ್ತು. ಈ ವೇಳೆ ದೋಸ್ತಿಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿತ್ತು. ನಂತರ ಎಸ್ಪಿ ಮಧ್ಯಪ್ರದೇಶದ 40 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ವಿಷಯದ ಬಗ್ಗೆ ಕೇಳಿದಾಗ, “ಎಸ್ಪಿ ಬಲವಾದ ಬೇರು ಹೊಂದಿರುವ ಮಧ್ಯಪ್ರದೇಶದಲ್ಲಿ ನಾವು ಕಾಂಗ್ರೆಸ್​ನಿಂದ ಕೇವಲ ಆರು ಸ್ಥಾನಗಳನ್ನು ಮಾತ್ರ ಕೇಳಿದ್ದೇವೆ. ಆದರೆ 2018 ರ ಚುನಾವಣೆಯಲ್ಲಿ ಎಸ್ಪಿ ಗೆದ್ದ ಸ್ಥಾನದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಲೋಕಸಭಾ ಚುನಾವಣೆ ಬಂದಾಗ ನಾವೂ ನಮ್ಮ ಶಕ್ತಿ ಪ್ರದರ್ಶಿಸುತ್ತೇವೆ’ ಎಂದು ಅಖಿಲೇಶ್​ ಹೇಳಿದ್ದಾರೆ.

“ನಾವು ಮಧ್ಯಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಮತ್ತು ನಾವು ಪ್ರಚಾರಕ್ಕಾಗಿ ಅಲ್ಲಿಗೆ ಹೋಗುತ್ತೇವೆ” ಎಂದು ಅವರು ಹೇಳಿದರು.

ಯಾವುದೇ ಕ್ಷುಲ್ಲಕ ಹೇಳಿಕೆಗಳನ್ನು ನೀಡದಂತೆ ಎಸ್ಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ ಯಾದವ್, “ರಾಷ್ಟ್ರೀಯ ನಾಯಕತ್ವದ ನೀತಿಗಳು ಮತ್ತು ನಿರ್ದೇಶನಗಳ ಪ್ರಕಾರ ಹೇಳಿಕೆಗಳನ್ನು ನೀಡಿ. ಪಕ್ಷದೊಳಗೆ ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಬೇಡಿ, ಬೂತ್ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವತ್ತ ಗಮನ ಹರಿಸಿ” ಎಂದು ಹೇಳಿದರು.

ಬಿಜೆಪಿ ವೈಫಲ್ಯಗಳನ್ನು ಬಹಿರಂಗ ಮಾಡಿ

ಬಿಜೆಪಿಯ ಸುಳ್ಳುಗಳನ್ನು ಆಡಳಿತದ ಎಲ್ಲಾ ಹಂತಗಳಲ್ಲಿನ ವೈಫಲ್ಯವನ್ನು ಬಹಿರಂಗಪಡಿಸಲು ಶ್ರದ್ಧೆಯಿಂದ ಕೆಲಸ ಮಾಡುವಂತೆ ಎಸ್ಪಿ ಮುಖ್ಯಸ್ಥರು ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ತಕ್ಷಣವೇ ಹೊರ ಹೋಗಬೇಕು ಎಂದು ಹೇಳಿದರು. ಪಕ್ಷವನ್ನು ಬಲಪಡಿಸಲು ಮತ್ತು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಸಮನ್ವಯ ಮತ್ತು ಸಹಕಾರಕ್ಕೆ ಒತ್ತು ನೀಡುವಂತೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪಾಲ್ ಯಾದವ್ ಕಾರ್ಯಕರ್ತರಿಗೆ ಕರೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮಗಳನ್ನು ಎದುರಿಸಲು ಬೂತ್ ನಿರ್ವಹಣೆಯ ಮೇಲೆ ಹೆಚ್ಚಿನ ಗಮನ ಹರಿಸಿದ ಅಖಿಲೇಶ್ ಯಾದವ್ ವಿಧಾನಸಭಾ ಕ್ಷೇತ್ರವಾರು ಬೂತ್ ಉಸ್ತುವಾರಿಗಳನ್ನು ನೇಮಿಸಿದ್ದಾರೆ. “ನಿಜವಾದ ಹೋರಾಟವು ಬೂತ್ ಮಟ್ಟದಲ್ಲಿ ಇರುತ್ತದೆ. ಬೂತ್ ಮಟ್ಟದಲ್ಲಿ ನಾವು ಬಲವಾಗಿ ಮತ್ತು ಜಾಗರೂಕರಾಗಿ ಇದ್ದರೆ, ಎಸ್ಪಿಯ ಗೆಲುವನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ” ಎಂದು ಹೇಳಿದರು.

Exit mobile version