ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ವಾಗ್ಯುದ್ಧ, ಪರಸ್ಪರ ಆರೋಪ, ಪ್ರತ್ಯಾರೋಪ ನಿಲ್ಲುತ್ತಿಲ್ಲ. ನೂತನ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆ ನಡೆಸಲು ಆರಂಭಿಸಿದಾಗಿನಿಂದ ಹಿಡಿದು ದೆಹಲಿಯಾದ್ಯಂತ ಶಾಲೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದವರೆಗೂ ಉಭಯ ಪಕ್ಷಗಳ ಮಧ್ಯೆ ರಾಜಕೀಯ ಮೇಲಾಟ ನಡೆಯುತ್ತಿದೆ. ಇದರ ಬೆನ್ನಲ್ಲೇ, ಆಪ್ ಹಾಗೂ ಬಿಜೆಪಿಯ ಇಬ್ಬರು ನಾಯಕರು ಕ್ಯಾಮೆರಾ ಎದುರೇ ವಾಕ್ಸಮರ (AAP BJP Spar) ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಹಾಗೂ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ದೆಹಲಿ ಹೊರವಲಯದ ಶಾಲೆಯೊಂದರ ಬಳಿ ವಾಕ್ಸಮರ ನಡೆಸಿದ್ದಾರೆ. ಬಳಿಕ ಇಬ್ಬರೂ ತಮ್ಮ ತಮ್ಮ ವಾದವನ್ನು ಪುಷ್ಟೀಕರಿಸುವ ವಿಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಈಗ ಎರಡೂ ವಿಡಿಯೊ ವೈರಲ್ ಆಗಿವೆ.
ಏನಿದು ಪ್ರಕರಣ?
ಆಮ್ ಆದ್ಮಿ ಪಕ್ಷವು ಒಂದೂ ಶಾಲೆಯನ್ನು ನಿರ್ಮಿಸಿಲ್ಲ ಎಂದು ಗೌರವ್ ಭಾಟಿಯಾ ಆರೋಪಿಸಿದ ಕಾರಣ, ನಿಮಗೆ ನಾವು ನಿರ್ಮಿಸಿದ ಶಾಲೆ ತೋರಿಸುತ್ತೇವೆ ಎಂದು ಸೌರಭ್ ಭಾರದ್ವಾಜ್ ಭಾಟಿಯಾ ಅವರನ್ನು ಶಾಲೆಯೊಂದಕ್ಕೆ ಆಹ್ವಾನಿಸಿದ್ದರು. ಅದರಂತೆ, ಗೌರವ್ ಭಾಟಿಯಾ ಅವರು ಶಾಲೆಗೆ ಭೇಟಿ ನೀಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಸೌರಭ್ ಹೇಳುವುದೇನು?
ಬಿಜೆಪಿ ನಾಯಕ ಗೌರವ್ ಭಾಟಿಯಾ ಅವರು ಶಾಲೆಯನ್ನು ಪ್ರವೇಶಿಸದೆ, ಪರಿಶೀಲನೆ ನಡೆಸದೆಯೇ ಪಲಾಯನ ಮಾಡಿದ್ದಾರೆ. “ನಾವು ನಿರ್ಮಿಸಿದ ೪೯೮ ಶಾಲೆಗಳು ಇವೆ. ತೋರಿಸುತ್ತೇವೆ ಬನ್ನಿ ಎಂದರೆ, ಅವರು ನೋಡದೆಯೇ ಪಲಾಯನ ಮಾಡಿದರು” ಎಂದು ದೂರಿದ್ದಾರೆ.
ಗೌರವ್ ಭಾಟಿಯಾ ವಾದವೇನು?
“೧೯೬೬ರಲ್ಲಿ ನಿರ್ಮಿಸಿದ ಶಾಲೆಯೊಂದಕ್ಕೆ ಆಮ್ ಆದ್ಮಿ ಪಕ್ಷದ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಮತ್ತೊಂದು ಶಾಲೆಗೆ ಹೋದರೆ ಅದು ಪೂರ್ಣಗೊಂಡಿಲ್ಲ. ಕಳೆದ ಎಂಟೂವರೆ ವರ್ಷದಲ್ಲಿ ಆಪ್ ಸರ್ಕಾರ ಮಾಡಿದ ಸಾಧನೆ ಇದು. ಸತ್ಯ ಈಗಲಾದರೂ ಹೊರಗೆ ಬಂತಲ್ಲ ಎಂಬ ಖುಷಿ ಇದೆ” ಎಂದು ಭಾಟಿಯಾ ಹೇಳಿದ್ದಾರೆ.
ನೂತನ ಅಬಕಾರಿ ನೀತಿ, ಶಾಲೆ ನಿರ್ಮಾಣದಲ್ಲಿ ಅಕ್ರಮ ಪ್ರಕರಣದಲ್ಲಿ ಆಪ್ ಹಾಗೂ ಬಿಜೆಪಿ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿದೆ. ನಮ್ಮ ಸರಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.
ಇದನ್ನೂ ಓದಿ | ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್ ಆಫರ್, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್ ಸಿಸೋಡಿಯಾ ಆರೋಪ