Site icon Vistara News

Mohan Bhagwat | ಮುಸ್ಲಿಮರು ಶ್ರೇಷ್ಠರೆಂಬ ಅಬ್ಬರ ಬಿಡಲಿ, ಭಾಗವತ್‌ ಹೇಳಿಕೆಗೆ ಓವೈಸಿ ಸೇರಿ ಹಲವರಿಂದ ಆಕ್ರೋಶ

Mohan Bhagwat Row

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅವರು ಮುಸ್ಲಿಮರು, ಹಿಂದುಸ್ತಾನ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ಮುಸ್ಲಿಮರು ತಾವು ಶ್ರೇಷ್ಠರು ಎಂಬ ಮನೋಭಾವ ಬಿಡಬೇಕು’, ‘ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇರಬೇಕು’ ಎಂಬುದು ಸೇರಿ ಹಲವು ವಿಷಯಗಳ ಕುರಿತು ನೀಡಿದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋಹನ್‌ ಭಾಗವತ್‌ ಹೇಳಿದ್ದೇನು?
“ಮುಸ್ಲಿಮರಿಗೆ ಭಾರತದಲ್ಲಿ ಯಾವುದೇ ಅಪಾಯ, ಬೆದರಿಕೆ ಇಲ್ಲ. ಮುಸ್ಲಿಮರು ತಮ್ಮ ನಂಬಿಕೆಯ ಆಧಾರದ ಮೇಲೆ ಬದುಕಬಹುದು ಅಥವಾ ಪುರಾತನ ಆಚರಣೆಗಳನ್ನೇ ಅನುಸರಿಸಬಹುದು. ಆದರೆ, ಅವರು ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು, ಆ ಅಬ್ಬರವನ್ನು ಬಿಡಬೇಕು” ಎಂದು ಆರ್‌ಎಸ್‌ಎಸ್‌ ಮುಖವಾಣಿಗಳಾದ ಪಾಂಚಜನ್ಯ ಹಾಗೂ ಆರ್ಗನೈಸರ್‌ಗೆ ಸಂದರ್ಶನ ನೀಡುವ ವೇಳೆ ಹೇಳಿದ್ದಾರೆ.

“ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಇರಬೇಕು. ನಾವು ಈ ನೆಲದ ಮೇಲೆ ಪ್ರಾಬಲ್ಯ ಸಾಧಿಸಿದ್ದೆವು. ಆ ಪ್ರಾಬಲ್ಯ ಮತ್ತೆ ಮರುಕಳಿಸಬೇಕಿದೆ. ನಮ್ಮ ದಾರಿ, ನಂಬಿಕೆಗಳೇ ಸರಿ, ಉಳಿದವರೆಲ್ಲರೂ ತಪ್ಪು ಎಂಬುದನ್ನು ಮುಸ್ಲಿಮರು ಬಿಡಬೇಕು. ಅಷ್ಟಕ್ಕೂ, ಭಾರತದಲ್ಲಿರುವ ಹಿಂದುಗಳು, ಕಮ್ಯುನಿಸ್ಟರು ಸೇರಿ ಎಲ್ಲರೂ ಇದೇ ಮಾದರಿಯನ್ನು ಅನುಸರಿಸಬೇಕು” ಎಂದಿದ್ದಾರೆ.

ನಮಗೆ ಹೇಳಲು ಭಾಗವತ್‌ ಯಾರು ಎಂದ ಓವೈಸಿ
ಮೋಹನ್‌ ಭಾಗವತ್‌ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ತಿರುಗೇಟು ನೀಡಿದ್ದಾರೆ. “ಭಾರತದಲ್ಲಿ ಮುಸ್ಲಿಮರು ಜೀವಿಸಲು ಅನುಮತಿ ನೀಡಲು ಮೋಹನ್‌ ಭಾಗವತ್‌ ಯಾರು” ಎಂದು ಪ್ರಶ್ನಿಸಿದ್ದಾರೆ. “ಮುಸ್ಲಿಮರು ಸಮಾನತೆ, ಸಮಾನ ನಾಗರಿಕತ್ವವನ್ನು ಪ್ರತಿಪಾದಿಸುತ್ತಿದ್ದಾರೆಯೇ ಹೊರತು, ಶ್ರೇಷ್ಠತೆಯನ್ನಲ್ಲ. ಭಾಗವತ್‌ ಅವರ ಹೇಳಿಕೆಯು ಹಿಂಸೆಗೆ ಪ್ರಚೋದನೆ ನೀಡುತ್ತಿದೆ. ವೈವಿಧ್ಯತೆ ಎಂಬುದು ಆರ್‌ಎಸ್‌ಎಸ್‌ಗೆ ದೇಶವಿರೋಧಿಯಾಗಿ ಕಾಣುತ್ತದೆ. ಇಷ್ಟೆಲ್ಲ ಮಾತನಾಡುವ ಭಾಗವತ್‌ ಅವರು, ನಿರುದ್ಯೋಗ, ಹಣದುಬ್ಬರದ ಕುರಿತು ಸೊಲ್ಲೆತ್ತುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಮನುಷ್ಯ ಮನುಷ್ಯನಾಗಿರಬೇಕು ಎಂದು ಸಿಬಲ್‌ ತಿರುಗೇಟು
ಮೋಹನ್‌ ಭಾಗವತ್‌ ಅವರಿಗೆ ಕಾಂಗ್ರೆಸ್‌ ನಾಯಕ ಕಬಿಲ್‌ ಸಿಬಲ್‌ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. “ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇರಬೇಕು. ಇದು ನಿಜ, ಆದರೆ, ಮೊದಲು ಮನುಷ್ಯ ಮನುಷ್ಯನಾಗಿರಬೇಕು” ಎಂದು ಕುಟುಕಿದ್ದಾರೆ. ಸಿಪಿಎಂ ನಾಯಕಿ ಬೃಂದಾ ಕಾರಟ್‌ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದು, “ಭಾಗವತ್‌ ಅವರು ನೀಡಿದ ಹೇಳಿಕೆ ಪ್ರಚೋದನಾತ್ಮಕ ಹಾಗೂ ಸಂವಿಧಾನವಿರೋಧಿ” ಎಂದಿದ್ದಾರೆ.

ಭಾಗವತ್‌ ಹೇಳಿಕೆಗೆ ನಕ್ವಿ ಸಮರ್ಥನೆ
ಮೋಹನ್‌ ಭಾಗವತ್‌ ನೀಡಿದ ಹೇಳಿಕೆಗಳನ್ನು ಕೇಂದ್ರ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅವರು ಸಮರ್ಥಿಸಿಕೊಂಡಿದ್ದಾರೆ. “ದೇಶದ ಅಭಿವೃದ್ಧಿ, ಏಳಿಗೆಗೆ ಮುಸ್ಲಿಮರ ಸಹಭಾಗಿತ್ವದ ಪ್ರಾಮುಖ್ಯತೆ ಕುರಿತು ಮೋಹನ್‌ ಭಾಗವತ್‌ ಹೇಳಿದ್ದಾರೆ. ಜಗತ್ತಿನಲ್ಲಿರುವ 10 ಮುಸ್ಲಿಮರಲ್ಲಿ ಒಬ್ಬ ಮುಸ್ಲಿಮನು ಭಾರತದಲ್ಲಿ ವಾಸಿಸುತ್ತಿದ್ದಾನೆ. ಆತನ ಹಕ್ಕುಗಳು ಸುರಕ್ಷಿತವಾಗಿವೆ, ಆತ ಸುರಕ್ಷಿತನಾಗಿದ್ದಾನೆ. ಆದರೆ, ಮುಸ್ಲಿಮರ ಮತಗಳನ್ನು ಗುತ್ತಿಗೆಗೆ ಪಡೆದುಕೊಂಡವರ ರೀತಿ ಆಡುವವರಿಗೆ ಭಾಗವತ್‌ ಹೇಳಿಕೆಯು ಸಹ್ಯವೆನಿಸುವುದಿಲ್ಲ” ಎಂದು ತಿರುಗೇಟು ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಕೆಯ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ | LGBTQ ಸಮುದಾಯದ ಖಾಸಗಿತನ ಗೌರವಿಸಿ: ಮೋಹನ್‌ ಭಾಗವತ್‌

Exit mobile version