ಒಟ್ಟಾವಾ: ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರಲ್ಲಿ ಸಂಚಲನ ಮೂಡಿಸಿದ ಕೆನಡಾ ಸಂಸದ ಚಂದ್ರ ಆರ್ಯ (ಚಂದ್ರಕಾಂತ್ ಆರ್ಯ) ಯಾರು? ಅವರ ಹಿನ್ನೆಲೆಯೇನು?-ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜನರಲ್ಲಿ, ಅದರಲ್ಲೂ ಕನ್ನಡಿಗರಲ್ಲಿ ಈ ಕುತೂಹಲ ಜಾಸ್ತಿಯಾಗಿದೆ. 59 ವರ್ಷದ ಚಂದ್ರ ಆರ್ಯ ಮೂಲತಃ ಕರ್ನಾಟಕದ ತುಮಕೂರಿನ ಶಿರಾ ತಾಲೂಕಿನ ದಾರಾಳು ಎಂಬ ಗ್ರಾಮದವರು. ಸದ್ಯ ಕೆನಡಾದಲ್ಲಿ ಆಡಳಿತ ನಡೆಸುತ್ತಿರುವ ಲಿಬರಲ್ ಪಾರ್ಟಿ ಆಪ್ ಕೆನಡಾದ ಸಂಸದರಾಗಿದ್ದಾರೆ.
ಲಿಬರಲ್ ಪಾರ್ಟಿ ಎಂಬುದು ಕೆನಡಾದ ಅತ್ಯಂತ ಹಳೆಯ ಮತ್ತು ದೀರ್ಘಾವಧಿಯಿಂದ ಆಡಳಿತ ನಡೆಸುತ್ತಿರುವ ಪಕ್ಷ. 2015ರಲ್ಲಿ ನಡೆದ ಕೆನಡಾ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಗೆದ್ದಿದೆ. ಆ ಚುನಾವಣೆಯಲ್ಲಿ ಆರ್ಯಾ ಅವರು ಕನ್ಸರ್ವೇಟಿವ್ ಪಕ್ಷದ ಆ್ಯಂಡಿ ವಾಂಗ್ ವಿರುದ್ಧ 10,000ಕ್ಕೂ ಹೆಚ್ಚು ಮತಗಳಿಂದ ಗೆದ್ದು, ಕೆನಡಾ ಸಂಸತ್ತಿಗೆ ಆಯ್ಕೆಯಾದರು. ಆ ವರ್ಷ ಚಂದ್ರ ಆರ್ಯ ಸೇರಿ, ಕೆನಡಾದಲ್ಲಿರುವ ಭಾರತೀಯ ಮೂಲದ ಒಟ್ಟು 19 ರಾಜಕಾರಣಿಗಳು ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ.ಗೋವಿಂದ ಅಯ್ಯರ್ ಎಂಬುವರ ಪುತ್ರನಾಗಿರುವ ಚಂದ್ರ ಆರ್ಯ, ಓದಿದ್ದೆಲ್ಲ ಭಾರತದಲ್ಲೇ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಕೆನಡಾಕ್ಕೆ ಹೋಗುವ ಮೊದಲು ದೆಹಲಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೋರೇಶನ್‌ನಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಕೆನಡಾಕ್ಕೆ ಹೋಗಿ ನೆಲೆಸಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾದ ಹೊಸ ಬಾಸ್ ಕ್ಯಾಂಬೆಲ್ ವಿಲ್ಸನ್
ಕೆನಡಾದಲ್ಲಿ ರಾಜಕೀಯ ಪ್ರವೇಶಕ್ಕೂ ಮೊದಲು ಅವರು Invest Ottawa ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇನ್ವೆಸ್ಟ್ ಒಟ್ಟಾವಾ ಎಂಬುದು ಒಟ್ಟಾವಾ ನಗರದಲ್ಲಿರುವ ಆರ್ಥಿಕ ಅಭಿವೃದ್ಧಿ ಏಜೆನ್ಸಿ. ಇದೊಂದು ಜ್ಞಾನಾಧಾರಿತ ಆರ್ಥಿಕತೆ ಉತ್ತೇಜನಾ ಸಂಸ್ಥೆ. ಅಂದರೆ ಹೊಸಹೊಸ ತಂತ್ರಜ್ಞಾನದ ಸ್ವರೂಪವನ್ನು ಅರ್ಥೈಸಿಕೊಂಡು, ಉದ್ಯಮದಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳುವದಕ್ಕೆ ಪೂರಕ ವ್ಯವಸ್ಥೆಯನ್ನು ಈ ಇನ್ವೆಸ್ಟ್ ಒಟ್ಟಾವಾ ಏಜೆನ್ಸಿ ಮಾಡಿಕೊಡುತ್ತದೆ. ಅದಾದ ಬಳಿಕ ಒಟ್ಟಾವಾದ ಯುನಿಟಿ ನಾನ್ ಪ್ರಾಫಿಟ್ ವಸತಿ ನಿಗಮದಲ್ಲಿ ಕೆಲಸ ಮಾಡಿದ್ದಾರೆ. ಒಟ್ಟಾವಾ ಸಮುದಾಯ ವಲಸಿಗರ ಸೇವಾ ಸಂಸ್ಥೆ ಮತ್ತು ಇಂಡೋ-ಕೆನಡಾ ಒಟ್ಟಾವಾ ಬಿಜಿನೆಸ್ ಚೇಂಬರ್‌ನ ಅಧ್ಯಕ್ಷರಾಗಿಯೂ ಚಂದ್ರ ಆರ್ಯ ಸೇವೆ ಸಲ್ಲಿಸಿದ್ದಾರೆ. ಇಂಡೊ ಕೆನಡಾ ಒಟ್ಟಾವಾ ಬಿಜಿನೆಸ್ ಚೇಂಬರ್, ಕೆನಡಿಯನ್ ಫೆಡರಲ್ ಕಾನೂನಿನಡಿ ನೋಂದಾಯಿತವಾಗಿ ಲಾಭರಹಿತ ಸಂಸ್ಥೆ. ಭಾರತ ಮತ್ತು ಕೆನಡಾ ವ್ಯಾಪಾರ, ಉದ್ಯಮಗಳಿಗೆ ಧನಸಹಾಯ ಮಾಡುವುದು, ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಯೋಜಿಸುವುದನ್ನು ಈ ಚೇಂಬರ್ ಮಾಡುತ್ತದೆ. ಹಾಗೇ, ಚಂದ್ರ ಆರ್ಯಾ ಫೆಡರೇಶನ್ ಆಫ್ ಕೆನಡಿಯನ್-ಬ್ರೆಜೆಲಿಯನ್ ಬಿಜಿನೆಸ್‌ನ ಸಂಸ್ಥಾಪಕ ನಿರ್ದೇಶಕರೂ ಆಗಿದ್ದರು. ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: Video| ಕೆನಡಾ ಸಂಸತ್ತಿನಲ್ಲಿ ಕನ್ನಡ; ಮಾತೃಭಾಷೆಯಲ್ಲೇ ಮಾತನಾಡಿದ ತುಮಕೂರು ಮೂಲದ ಸಂಸದ