ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಕೂಟವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ 71 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಜೂನ್ 24ರಿಂದ ಜುಲೈ 3ರವರೆಗೆ ಸಂಸತ್ ವಿಶೇಷ ಅಧಿವೇಶನ (Parliament Session 2024) ಕರೆಯಲಾಗಿದೆ. ವಿಶೇಷ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಆಯ್ಕೆ ಸೇರಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಜೂನ್ 24ರಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗುತ್ತದೆ. ಜೂನ್ 24 ಹಾಗೂ ಜೂನ್ 25ರಂದು ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 26ರಂದು ಲೋಕಸಭೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು 8 ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಯಾವುದೇ ವಿಧೇಯಕಗಳ ಮಂಡನೆ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಖಾತೆ ಹಂಚಿಕೆಯಲ್ಲಿ ಮೋದಿ ಪಾರಮ್ಯ
ಸಚಿವರಿಗೆ ಖಾತೆ ಹಂಚಿಕೆಯಲ್ಲೂ ನರೇಂದ್ರ ಮೋದಿ ಅವರೇ ಪ್ರಾಬಲ್ಯ ಮೆರೆದಿದ್ದಾರೆ. ಕೇಂದ್ರ ಗೃಹ ಖಾತೆಯನ್ನು ಅಮಿತ್ ಶಾ ಅವರಿಗೆ, ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾಮನ್, ರಕ್ಷಣಾ ಖಾತೆಯನ್ನು ರಾಜನಾಥ್ ಸಿಂಗ್ ಹಾಗೂ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆಯನ್ನು ನಿತಿನ್ ಗಡ್ಕರಿ ಅವರಿಗೇ ನೀಡುವ ಮೂಲಕ ನರೇಂದ್ರ ಮೋದಿ ಅವರು ಮೊದಲಿನಂತೆಯೇ ಬಿಜೆಪಿ ಬಳಿಯೇ ಉಳಿಸಿಕೊಳ್ಳುವ ಮೂಲಕ ಚಾಣಾಕ್ಷತನ ಮೆರೆದಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರದ ಮೇಲೆಯೂ ತಮ್ಮ ಹಿಡಿತ ಇದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಮೈತ್ರಿ ಸರ್ಕಾರ ರಚನೆಗೂ ಮೊದಲು, ನಿತೀಶ್ ಕುಮಾರ್ ಹಾಗೂ ಟಿಡಿಪಿ ಸೇರಿ ಮೈತ್ರಿ ಪಕ್ಷಗಳಿಗೇ ಪ್ರಮುಖ ನಾಲ್ಕು ಖಾತೆಗಳಲ್ಲಿ ಒಂದಷ್ಟನ್ನು ಮೋದಿ ನೀಡಬೇಕಾಗುತ್ತದೆ. ಅದರಲ್ಲೂ ಗೃಹ ಖಾತೆ ಹಾಗೂ ಹಣಕಾಸು ಖಾತೆಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ, ಮೊದಲ ಹಾಗೂ ಎರಡನೇ ಅವಧಿಯಂತೆ, ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಅವರು ಪ್ರಮುಖ ಖಾತೆಗಳನ್ನು ಬಿಜೆಪಿ ಬಳಿಯೇ ಉಳಿಸಿಕೊಳ್ಳುವ ಮೂಲಕ ತಮ್ಮ ಹಿಡಿತವನ್ನು ಸಾಬೀತುಪಡಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Narendra Modi: ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಿ ಮೋದಿ ಸಚಿವರಿಗೆ ಹೇಳಿದ ಕಿವಿ ಮಾತು ಇದು