Site icon Vistara News

Special Parliament Session: 75 ವರ್ಷಗಳ ಸಂಸತ್‌ ಹಾದಿ ನೆನೆದ ಪ್ರಧಾನಿ, ನೆಹರೂ ಹೊಗಳುತ್ತಲೇ ಕಾಂಗ್ರೆಸ್‌ಗೆ ಕುಟುಕಿದ ಮೋದಿ

Narendra Modi Speech In Lok Sabha

Special Parliament Session: Narendra Modi Remembers Nehru, Indira And Journalists; here is why

ನವದೆಹಲಿ: ಹಳೆಯ ಸಂಸತ್‌ ಸಂಸತ್‌ ಭವನದಲ್ಲಿ (Special Parliament Session) ಸೋಮವಾರ ಕೊನೆಯ ಅಧಿವೇಶನದ ದಿನವಾದ ಕಾರಣ ನರೇಂದ್ರ ಮೋದಿ ಅವರು ಹಲವರಿಗೆ ಧನ್ಯವಾದ ತಿಳಿಸಿದರು. ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಅವರು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಸೇರಿ ಹಲವು ವ್ಯಕ್ತಿಗಳನ್ನು ಸ್ಮರಿಸಿದರು. ಹಿಂದಿನ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರ ಕಾರ್ಯವನ್ನು ಶ್ಲಾಘಿಸುತ್ತಲೇ, ತುರ್ತು ಪರಿಸ್ಥಿತಿ ಜಾರಿಯಾಗಿದ್ದೂ ಇದೇ ಸಂಸತ್‌ನಲ್ಲಿ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕುಟುಕಿದರು.

“ಹಳೆಯ ಸಂಸತ್‌ ಭವನವು ಕಳೆದ 75 ವರ್ಷದಲ್ಲಿ ದೇಶದ ವಿಕಾಸಕ್ಕೆ ಕಾರಣವಾಗಿದೆ. ಇದೇ ಸಂಸತ್‌ನಲ್ಲಿ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು ಸಭೆ ನಡೆಸಲಾಗಿದೆ. ನೆಹರು ಅವರ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಸಚಿವರಾದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಸಮಗ್ರ ಜನರಿಗೆ ತಲುಪುವ ಯೋಜನೆಗಳನ್ನು ರೂಪಿಸಿದರು. ಆ ಮೂಲಕ ದೇಶದ ಜನರಿಗೆ ಯೋಜನೆ ತಲುಪುವಲ್ಲಿ ಮೊದಲ ಸರ್ಕಾರವು ಮುನ್ನುಡಿ ಬರೆಯಿತು” ಎಂದು ಮೋದಿ ಹೇಳಿದರು.

“ಜವಾಹರ ಲಾಲ್‌ ನೆಹರು, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ, ಡಾ.ಬಾಬು ರಾಜೇಂದ್ರ ಪ್ರಸಾದ್‌, ರಾಮನಾಥ್‌ ಕೋವಿಂದ್‌, ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಪಿ.ವಿ.ನರಸಿಂಹರಾವ್‌ ಸೇರಿ ನೂರಾರು ಧೀಮಂತರು, 7,500 ಸಂಸದರು ದೇಶದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಈ ಸಂಸತ್ತು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೂ ಕಂಡಿದೆ, ಯುದ್ಧ ಘೋಷಣೆ ಸೇರಿ ಹಲವು ಕಠಿಣ ನಿರ್ಧಾರಗಳ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ” ಎಂದು ಮೋದಿ ಸ್ಮರಿಸಿದರು.

ಇದನ್ನೂ ಓದಿ: Special Parliament Session: ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…

ಪತ್ರಕರ್ತರಿಗೆ ಮೋದಿ ಧನ್ಯವಾದ

“ಗಣ್ಯರ ಜತೆಗೆ ಸಂಸತ್ತಿನ ಪ್ರತಿಯೊಬ್ಬ ಸಿಬ್ಬಂದಿಯೂ ಕೊಡುಗೆ ನೀಡಿದ್ದಾರೆ. ಕೆಲವೊಮ್ಮೆ ರಾತ್ರಿಯವರೆಗೆ ಕಲಾಪಗಳು ನಡೆದಾಗ ಇಲ್ಲಿನ ಸಿಬ್ಬಂದಿಯು ಊಟ ಪೂರೈಸಿದ್ದಾರೆ. ಅಷ್ಟೇ ಏಕೆ ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆದಾಗ ವೀರ ಭದ್ರತಾ ಸಿಬ್ಬಂದಿಯು ಗುಂಡಿಗೆ ಎದೆಯೊಡ್ಡಿದರು. ಅದೇ ರೀತಿ, ಪತ್ರಕರ್ತರು ಕೂಡ ಇಲ್ಲಿನ ಪ್ರಮುಖ ನಿರ್ಧಾರಗಳನ್ನು ಜನರಿಗೆ ತಿಳಿಸಿದರು. ಈಗ ತಂತ್ರಜ್ಞಾನ ಇದೆ, ಮೊದಲು ಇಲ್ಲಿನ ತೀರ್ಮಾನಗಳನ್ನು ಪತ್ರಕರ್ತರೇ ಜನರಿಗೆ ತಲುಪಿಸುತ್ತಿದ್ದರು. ಕೆಲವು ಪತ್ರಕರ್ತರು ಇಡೀ ಜೀವನವನ್ನು ಸಂಸತ್‌ ವರದಿಯಲ್ಲೇ ಕಳೆದಿದ್ದಾರೆ. ಇವರೆಲ್ಲರಿಗೂ ಧನ್ಯವಾದ” ಎಂದರು.

“ಹಳೆಯ ಸಂಸತ್‌ ಭವನವು ದೇಶದ ಎಲ್ಲರಿಗೂ ಸೌಲಭ್ಯ ನೀಡಿದೆ. ಬಡವರು, ದಲಿತರು, ತುಳಿತಕ್ಕೊಳಗಾದವರ ಭವಿಷ್ಯಕ್ಕೆ ಅಡಿಗಲ್ಲು ಹಾಕಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಸತ್‌ ಸದಸ್ಯರು ತಮ್ಮ ವೇತನದ ಭಾಗವನ್ನು ನೀಡಿದರು. ಕ್ಯಾಂಟೀನ್‌ನ ಸಬ್ಸಿಡಿ ಬಿಟ್ಟರು. ಆ ಮೂಲಕ ದೇಶದ ಜನರಿಗೆ ಮಾದರಿ ಎನಿಸಿದರು” ಎಂದು ತಿಳಿಸಿದರು.

ಹೊಸ ಸಂಸತ್ತಿಗೆ ವಿಶ್ವಾಸದೊಂದಿಗೆ ಸಾಗೋಣ

“ನಾವು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಸತ್ತಿಗೆ ಹೋಗೋಣ. ಎಲ್ಲರೂ ಹೊಸ ವಿಶ್ವಾಸ, ಮನೋಭಾವದೊಂದಿಗೆ ಹೊಸ ಸಂಸತ್ತಿಗೆ ಹೊರಡೋಣ. ಎಲ್ಲ ಸದಸ್ಯರು ಕೂಡ ತಮ್ಮ ಅನುಭವಗಳನ್ನು ಜನರಿಗೆ ತಿಳಿಸಿ ಎಂಬುದಾಗಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಮೋದಿ ಭಾಷಣ ಮುಗಿಸಿದರು.

Exit mobile version