Site icon Vistara News

Special Parliament Session: ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…

Narendra Modi Speech In Lok Sabha

Prime Minister Narendra Modi Speech In Lok Sabha

ನವದೆಹಲಿ: ಸಂಸತ್‌ನಲ್ಲಿ ಸೋಮವಾರ ಐದು ದಿನಗಳ ವಿಶೇಷ ಅಧಿವೇಶನ ಆರಂಭವಾಗಿದೆ. ಮಂಗಳವಾರ ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಿರುವುದರಿಂದ ಹಾಗೂ ಹಳೆಯ ಭವನದಲ್ಲಿ ಕೊನೆಯ ಅಧಿವೇಶನ ಆಗಿರುವುದರಿಂದ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹಳೆಯ ಸಂಸತ್‌ ಭವನದ ಕುರಿತು ಮಾತನಾಡಿದರು. ಇದೇ ವೇಳೆ ಮೋದಿ ಅವರು, “ಹಳೆಯ ಸಂಸತ್‌ ಭವನವು ದೇಶದ ಏಳಿಗೆಯ, ಅಭಿವೃದ್ಧಿಯ ಹಾಗೂ ಪ್ರಜಾಪ್ರಭುತ್ವ ಸಂಕೇತವಾಗಿದೆ” ಎಂದರು. ಹಾಗೆಯೇ, 2014ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ ತಮ್ಮ ಅನುಭವವನ್ನೂ ಹಂಚಿಕೊಂಡರು.

“ಸಂಸತ್‌ ಭವನವನ್ನು ಬ್ರಿಟಿಷರು ನಿರ್ಮಿಸಿದರೂ, ಇದರ ನಿರ್ಮಾಣಕ್ಕೆ ಭಾರತೀಯರ ಬೆವರು ಹರಿದಿದೆ, ಭಾರತೀಯರ ಹಣ ಖರ್ಚಾಗಿದೆ. ನಾವು ಹೊಸ ಸಂಸತ್‌ ಭವನ ಪ್ರವೇಶಿಸುತ್ತಿದ್ದರೂ, ಮುಂಬರುವ ಪೀಳಿಗೆಗೆ ಹಳೆಯ ಸಂಸತ್‌ ಭವನದ ಇತಿಹಾಸ, ಶ್ರೇಷ್ಠತೆ, ಕೊಡುಗೆಯನ್ನು ತಿಳಿಸಬೇಕಿದೆ” ಎಂದು ತಿಳಿಸಿದರು.

ಸಂಸತ್ತಿಗೆ ವಿದಾಯ ಹೇಳುವುದು ಕಷ್ಟಕರ

“ಹಳೆಯ ಸಂಸತ್‌ ಭವನದಿಂದ ಹೊಸ ಸಂಸತ್ತಿಗೆ ತೆರಳುತ್ತಿರುವುದು ಕಷ್ಟವಾಗುತ್ತಿದೆ. ಯಾವುದೇ ಕುಟುಂಬವು ಒಂದು ಮನೆಯನ್ನು ಬಿಟ್ಟು ಹೋಗುವುದು ಎಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆಯೋ, ಅಷ್ಟೇ ಭಾವನಾತ್ಮಕ ಕ್ಷಣಗಳಿಗೆ ಹಳೆಯ ಸಂಸತ್‌ ಭವನವು ದೂಡಿದೆ. ಆದರೆ, ಈ ಸಂಸತ್‌ ಭವನದ ನೆನಪುಗಳು ಎಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಇರುತ್ತವೆ. ಸಂಸತ್‌ನಲ್ಲಿ ಅಭಿವೃದ್ಧಿ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ, ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿದೆ, 75 ವರ್ಷಗಳಿಂದ ದೇಶದ ಏಳಿಗೆಗೆ ಸಂಸತ್‌ ಭವನ ಸಾಕ್ಷಿಯಾಗಿದೆ. ಸಂಸತ್‌ನಲ್ಲಿ ಕೆಲವೊಮ್ಮೆ ಗಲಾಟೆಯೂ ನಡೆದಿದೆ. ಆದರೆ, ಇದು ದೇಶದ ಅಭಿವೃದ್ಧಿಗೆ ಕಾರಣವಾಗಿದೆ” ಎಂದರು.

“ನಾನು ಮೊದಲ ಬಾರಿಗೆ ಸಂಸತ್‌ ಭವನವನ್ನು ಪ್ರವೇಶಿಸಿದಾಗ, ಭವನದ ಮೆಟ್ಟಿಲುಗಳಿಗೆ ನಾನು ನಮನ ಸಲ್ಲಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಮನ ಸಲ್ಲಿಸಿದ್ದೆ. ಆಗ ನನಗೆ ಭಾವನಾತ್ಮಕ ಕ್ಷಣವಾಗಿತ್ತು. ಬಡ ಕುಟುಂಬದ ವ್ಯಕ್ತಿಯೊಬ್ಬ ಸಂಸತ್ತಿನ ಮೆಟ್ಟಿಲು ಹತ್ತುವ ಕ್ಷಣವು ನನಗೆ ಭಾವುಕ ಕ್ಷಣವಾಗಿತ್ತು. ನಾನು ಅಂತಹ ಹುದ್ದೆ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಇದೇ ಪ್ರಜಾಪ್ರಭುತ್ವ ಹಾಗೂ ಸಂಸತ್‌ ಭವನದ ಸೌಂದರ್ಯವಾಗಿದೆ” ಎಂದು 2014ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುವ ವೇಳೆ ನಮನ ಸಲ್ಲಿಸಿದ ಕುರಿತು ಉಲ್ಲೇಖಿಸಿದರು.

“ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಭಾರತವು ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ದೇಶವು ಏಳಿಗೆಯತ್ತ ಸಾಗುತ್ತಿದೆ. ನಾಲ್ಕೂ ದಿಕ್ಕುಗಳಿಂದ ಭಾರತದ ಬಗ್ಗೆ ಹೆಮ್ಮೆ, ಗೌರವದ ಮಾತುಗಳು ಕೇಳಿಬರುತ್ತಿವೆ. ಚಂದ್ರಯಾನ 3 ಮಿಷನ್‌ ಯಶಸ್ಸಿನ ಬಳಿಕವಂತೂ ಜಾಗತಿಕವಾಗಿ ಭಾರತದ ಬಗ್ಗೆ ಅಭಿಪ್ರಾಯವೇ ಬದಲಾಗಿದೆ. ವಿಜ್ಞಾನ, ಇಚ್ಛಾಶಕ್ತಿ, ಜನರ ಸಂಕಲ್ಪದಿಂದ ಇದೆಲ್ಲ ಸಾಕಾರವಾಗಿದೆ. ಸದನದ ಪರವಾಗಿ ದೇಶದ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆಗಳು” ಎಂದು ಹೇಳಿದರು.

ಇದನ್ನೂ ಓದಿ: Special Parliament Session: ಇಂದಿನಿಂದ ಸಂಸತ್‌ ವಿಶೇಷ ಅಧಿವೇಶನ; ಕಾದಿದೆಯಾ ಅಚ್ಚರಿ?

ಜಿ20 ಯಶಸ್ಸಿನ ಬಗ್ಗೆಯೂ ಪ್ರಸ್ತಾಪ

“ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸಿನ ಕುರಿತು ಕೂಡ ಮೋದಿ ಪ್ರಸ್ತಾಪಿಸಿದರು. “ಜಿ20 ಶೃಂಗಸಭೆಯು ಯಶಸ್ವಿಯಾಗಿದೆ. ಇದು ಯಾವೊಬ್ಬ ವ್ಯಕ್ತಿಯ ಯಶಸ್ಸಲ್ಲ, ಇದು ಭಾರತದ ಯಶಸ್ಸು. ಇದರ ಯಶಸ್ಸನ್ನು ನಾವೆಲ್ಲರೂ ಕೂಡಿ ಸಂಭ್ರಮಿಸಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಜಿ20 ಶೃಂಗಸಭೆಯ ಯಶಸ್ಸಿನ ಶ್ರೇಯಸ್ಸು ಎಲ್ಲರಿಗೂ ಸಲ್ಲಬೇಕಿದೆ. ಅಲ್ಲದೆ, ಜಿ20ಗೆ ಆಫ್ರಿಕಾ ಒಕ್ಕೂಟವನ್ನೂ ಸೇರಿಸಿಕೊಳ್ಳುವ ಸೌಭಾಗ್ಯವೂ ಭಾರತದ್ದಾಯಿತು. ಇದರಿಂದ ಆಫ್ರಿಕಾ ಒಕ್ಕೂಟವು ನಮಗೆ ಧನ್ಯವಾದ ತಿಳಿಸಿತು” ಎಂದು ತಿಳಿಸಿದರು.

Exit mobile version