Site icon Vistara News

SpiceJet Flight: ಸ್ಪೈಸ್‌ಜೆಟ್‌ ವಿಮಾನ 12 ಗಂಟೆ ವಿಳಂಬ; ಪ್ರಯಾಣಿಕರ ಪರದಾಟ

SpiceJet Flight

SpiceJet Flight

ನವದೆಹಲಿ: ನವದೆಹಲಿಯಿಂದ ಬೆಂಗಳೂರಿಗೆ ಶುಕ್ರವಾರ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನ (SpiceJet Flight) ಸುಮಾರು 12 ಗಂಟೆಗಳ ಕಾಲ ತಡವಾಗಿ ಶನಿವಾರ ಪ್ರಯಾಣ ಬೆಳೆಸಿತು. ಶುಕ್ರವಾರ ಸುಮಾರು 7 ಗಂಟೆಗೆ ಹೊರಡಬೇಕಿದ್ದ ಈ Sಜಿ 8151 (SG 8151) ವಿಮಾನ ಇಂದು ಬೆಳಗ್ಗೆ 6.30ಕ್ಕೆ ಟೇಕಾಫ್‌ ಆಗಿದೆ. ವಿಮಾನ ವಿಳಂಬಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

7 ಗಂಟೆಗೆ ಹೊರಡಬೇಕಾಗಿದ್ದ ವಿಮಾನದಲ್ಲಿ ಪ್ರಯಾಣಿಸಲು ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರು ಕಾದು ಕುಳಿತಿದ್ದರು. ಕೊನೆಗೆ ತಡರಾತ್ರಿ 1 ಗಂಟೆ ಸುಮಾರಿಗೆ ಅವರನ್ನು ವಿಮಾನಕ್ಕೆ ಹತ್ತಿಸಲಾಯಿತು. ಆದರೆ ವಿಮಾನ ಬೆಳಿಗ್ಗೆ 6.30ರ ತನಕ ಟೇಕಾಫ್‌ ಆಗಿರಲೇ ಇಲ್ಲ. ಹೀಗಾಗಿ ಪ್ರಯಾಣಿಕರು ವಿಮಾನದಲ್ಲೇ ಅಕ್ಷರಶಃ ಬಂಧಿಗಳಾಗಿದ್ದರು. ಕೊನೆಗೆ 6.30ಕ್ಕೆ ಬೆಂಗಳೂರಿನತ್ತ ಹೊರಟಿತು ಎಂದು ಮೂಲಗಳು ತಿಳಿಸಿವೆ.

ಸ್ಪೈಸ್‌ಜೆಟ್‌ ಮೂಲಗಳು ಹೇಳಿದ್ದೇನು?

ದೆಹಲಿ-ಬೆಂಗಳೂರು ವಿಮಾನ ಟೇಕ್ ಆಫ್ ವಿಳಂಬಕ್ಕೆ ಪ್ರತಿಕ್ರಿಯಿಸಿದ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಪ್ರಯಾಣಿಕರನ್ನು ಕೆರಳಿಸಿತ್ತು. ಪೈಲಟ್ ಇಲ್ಲದ ಕಾರಣ ಟೇಕಾಫ್‌ ವಿಳಂಬವಾಗಿದೆ ಎಂದು ಅಧಿಕಾರಿಗಳು ಬೇಜಾವಬ್ದಾರಿಯುತ ಹೇಳಿಕೆ ನೀಡಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ವಿಡಿಯೊ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿಕೊಂಡು ಒದ್ದಾಡುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಯಾಣಿಕರು ಹೇಗೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಮಾನ ನಿಲ್ದಾಣವನ್ನು ಮತ್ತು ವಿಮಾನಕ್ಕೆ ಸಂಪರ್ಕಿಸುವ ಗ್ಯಾಂಗ್ ವೇ (Aerobridge) ಪ್ರಯಾಣಿಕರಿಂದ ತುಂಬಿರುವುದನ್ನು ಕಾಣಬಹುದು.

ವಿಮಾನದಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದರು. ಹೀಗಾಗಿ ಅವರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಜತೆಗೆ ದೆಹಲಿ-ಗೋವಾಕ್ಕೆ ತೆರಳುವ ಸ್ಲೈಸ್‌ಜೆಟ್‌ ವಿಮಾನವೂ ಸುಮಾರು 16 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಸೋಷಿಯಲ್‌ ಮೀಡಿಯಾದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ ಸಿಬ್ಬಂದಿ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸ್ಪೈಸ್‌ಜೆಟ್‌ ಫ್ಲೈಟ್‌ನಲ್ಲಿ ಮತ್ತೆ ದೋಷ; ದುಬೈನಿಂದ ಆಗಮಿಸಬೇಕಿದ್ದ ವಿಮಾನ ವಿಳಂಬ

ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಯಾಣಿಕರು

ಕೆಲವು ದಿನಗಳ ಹಿಂದೆಯೂ ಇಂತಹದ್ದೇ ಘಟನೆ ನಡೆದಿತ್ತು. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ (Air India Flight) 20 ಗಂಟೆಗಳ ಕಾಲ ವಿಳಂಬವಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿತ್ತು. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ವಿಮಾನದೊಳಗೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಏರ್‌ ಇಂಡಿಯಾ, ʼʼಈ ಘಟನೆಗಾಗಿ ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ತಂಡದವರು ಸೂಕ್ತವಾಗಿ ಸ್ಪಂದಿಸಲಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆʼʼ ಎಂದು ತಿಳಿಸಿತ್ತು.

Exit mobile version