ನವದೆಹಲಿ: ವಿಮಾನಗಳಲ್ಲಿ ಇತ್ತೀಚೆಗೆ ಪ್ರಯಾಣಿಕರ ಅನುಚಿತ ವರ್ತನೆಗಳು ಮಿತಿಮೀರುತ್ತಿವೆ. ವಿಮಾನದ ಸಿಬ್ಬಂದಿ ಜತೆ ಜಗಳ, ಸಹ ಪ್ರಯಾಣಿಕರಿಗೆ ಕಿರುಕುಳ ನೀಡಿದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ಸ್ಪೈಸ್‌ಜೆಟ್ ವಿಮಾನದಲ್ಲಿ ವೃದ್ಧನೊಬ್ಬ ಕದ್ದು ಗಗನಸಖಿಯರ ಫೋಟೊ ತೆಗೆದಿದ್ದಾನೆ. ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.
ದೆಹಲಿಯಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ 157 ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನ ಹಾರಾಟ ಆರಂಭಿಸುತ್ತಲೇ ಮುಂದಿನ ಸೀಟಿನಲ್ಲಿ ಕುಳಿತ ವೃದ್ಧ ಪ್ರಯಾಣಿಕನೊಬ್ಬ ಗಗನಸಖಿಯರ ಫೋಟೊ ತೆಗೆದಿದ್ದಾನೆ. ಹಾಗೆಯೇ, ಅನುಚಿತವಾಗಿ ವರ್ತಿಸಿದ್ದಾನೆ. ಸಹ ಪ್ರಯಾಣಿಕರೊಬ್ಬರು ಇದನ್ನು ಆಕ್ಷೇಪಿಸಿದಾಗ ಅವರಿಗೂ ಕಿರುಕುಳ ನೀಡಿದ್ದಾನೆ ಎಂದು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆ ವಿವರಿಸಿದ ಯುವತಿ
ಮಹಿಳಾ ಆಯೋಗ ನೋಟಿಸ್
ವಿಮಾನದಲ್ಲಿ ಘಟನೆ ನಡೆದಿರುವುದನ್ನು ವಿಮಾನಯಾನ ಸಂಸ್ಥೆಯು ಖಚಿತಪಡಿಸಿದೆ. ಇನ್ನು ಅನುಚಿತವಾಗಿ ವರ್ತಿಸಿದ ವೃದ್ಧನಿಗೆ ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ. “ಸ್ಪೈಸ್‌ಜೆಟ್ ವಿಮಾನದಲ್ಲಿ ಗಗನಸಖಿಯರ ಜತೆ ಅನುಚಿತವಾಗಿ ವರ್ತಿಸಿದ ಕುರಿತು ವಿಡಿಯೊ ವೈರಲ್ ಆದ ಬಳಿಕ ಆ ವ್ಯಕ್ತಿಗೆ ಮಹಿಳಾ ಆಯೋಗವು ನೋಟಿಸ್ ನೀಡಿದೆ” ಎಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Heart Attack : ವಿಮಾನ ಟೇಕ್ಆಫ್ಗೆ ಮೊದಲು ಪೈಲೆಟ್ ಹೃದಯಾಘಾತದಿಂದ ಸಾವು
ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.