ಜೈಪುರ: ರಾಜಸ್ಥಾನದ ಕೋಟಾ ಜಿಲ್ಲಾಡಳಿತವು ವಿದ್ಯಾರ್ಥಿಗಳ ಆತ್ಮಹತ್ಯೆ (Kota Suicides) ತಡೆಯಲು ಒಂದು ವಿಚಿತ್ರ ಪರಿಹಾರ (suicide prevention) ಕಂಡುಕೊಂಡಿದೆ! ಅಲ್ಲಿನ ಎಲ್ಲಾ ಹಾಸ್ಟೆಲ್ ಕೊಠಡಿಗಳಲ್ಲಿ ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲು ಆದೇಶಿಸಿದೆ. ಇವು ಭಾರ ಹಾಕಿದರೆ ಕಿತ್ತು ಬರುವಂಥ ಫ್ಯಾನ್‌ಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ಕೋಟಾ ಜಿಲ್ಲೆಯಲ್ಲಿ ಮಾನಸಿಕ ಒತ್ತಡದ ಪರಿಣಾಮ 21 ವಿದ್ಯಾರ್ಥಿಗಳು ಆತ್ಮಹತ್ಯೆ (students suicide) ಮಾಡಿಕೊಂಡಿದ್ದಾರೆ. ದೇಶದ ಕೋಚಿಂಗ್ ಹಬ್ ಎಂದು ಕರೆಸಿಕೊಂಡಿರುವ ಈ ಜಿಲ್ಲೆ ಈ ಆತ್ಮಹತ್ಯೆಗಳ ಸರಣಿಯಿಂದಾಗಿ ಕಂಪನಕ್ಕೊಳಗಾಗಿದೆ. ಹಲವು ತುರ್ತು ಸುಧಾರಣೆಗಳಿಗೆ ಕರೆ ನೀಡಲಾಗಿದೆ.
ಕೋಟ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬಂಕರ್ ಅವರು ಹೊರಡಿಸಿದ ಆದೇಶದಲ್ಲಿ, “ಕೋಟದಲ್ಲಿ ಓದುತ್ತಿರುವ/ವಾಸಿಸುವ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸಲು ಮತ್ತು ಕೋಟ ನಗರದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು, ರಾಜ್ಯದ ಎಲ್ಲಾ ಹಾಸ್ಟೆಲ್/ಪಿಜಿ ನಿರ್ವಾಹಕರು ಪ್ರತಿ ಕೊಠಡಿಯಲ್ಲಿನ ಫ್ಯಾನ್‌ಗಳಲ್ಲಿ ಭದ್ರತಾ ಸ್ಪ್ರಿಂಗ್ ಸಾಧನವನ್ನು ಸ್ಥಾಪಿಸಬೇಕುʼʼ ಎಂದು ನಿರ್ದೇಶಿಸಿದ್ದಾರೆ.
ಶನಿವಾರ ಜಿಲ್ಲಾಡಳಿತವು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ಹಾಸ್ಟೆಲ್‌ಗಳು ಮತ್ತು ಪಿಜಿಗಳ ಮಾಲೀಕರನ್ನು ಸೇರಿಸಿ ಸಭೆ ನಡೆಸಿದೆ. ಡಿಸೆಂಬರ್ 2022ರಲ್ಲಿ ಹೊರಡಿಸಿದ ಆದೇಶವನ್ನು ಪಾಲಿಸುವಂತೆ ಅದು ಅವರನ್ನು ಒತ್ತಾಯಿಸಿದೆ. ಅದರ ಪ್ರಕಾರ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ರಜೆ, ಕ್ಲಾಸಿಗೆ ಗರಿಷ್ಠ 80 ವಿದ್ಯಾರ್ಥಿಗಳ ಮಿತಿ, ಕಡ್ಡಾಯ ಮಾನಸಿಕ ಮೌಲ್ಯಮಾಪನಗಳನ್ನು ಕಡ್ಡಾಯಗೊಳಿಸಿದೆ. ಆದೇಶವನ್ನು ಅನುಸರಿಸದ ವಸತಿ ಮತ್ತು ಸಂಸ್ಥೆಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.
ಈ ಸೀಲಿಂಗ್ ಫ್ಯಾನ್‌ಗಳಲ್ಲಿನ ಸ್ಪ್ರಿಂಗ್‌ಗಳು ಭಾರಕ್ಕೆ ತಕ್ಕಂತೆ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ನೇಣು ಹಾಕಿಕೊಂಡರೆ ಅದು ಸೀಲಿಂಗ್‌ನಿಂದ ಪರಿಣಾಮಕಾರಿಯಾಗಿ ಬೇರ್ಪಡುತ್ತದೆ. ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸೆನ್ಸರ್‌ಗಳನ್ನು ಕೂಡ ಅಳವಡಿಸಲಾಗುತ್ತದೆ. ಹಲವು ಸಂಸ್ಥೆಗಳು ಈಗಾಗಲೇ ಇವುಳನ್ನು ಸ್ಥಾಪಿಸಿವೆ.
ಕೋಟಾದಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಗಳವಾರದ ಆತ್ಮಹತ್ಯೆ ಈ ತಿಂಗಳಲ್ಲಿ ಜಿಲ್ಲೆಯಲ್ಲಿ ನಾಲ್ಕನೇ ಮತ್ತು ಈ ವರ್ಷದ 21ನೇ ಆತ್ಮಹತ್ಯೆಯಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಕೋಟಾದಲ್ಲಿ 2022ರಲ್ಲಿ 15, 2019ರಲ್ಲಿ 18, 2018ರಲ್ಲಿ 20, 2017ರಲ್ಲಿ ಏಳು, 2016ರಲ್ಲಿ 17, 2015ರಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಟಾದಲ್ಲಿ ಸುಮಾರು 225,000 ವಿದ್ಯಾರ್ಥಿಗಳು ವೃತ್ತಿ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುತ್ತಾರೆ. ಇದು ಭಾರತದ ಕೋಚಿಂಗ್ ಹಬ್ ಎನಿಸಿದೆ. ದೇಶದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಚಿಕ್ಕ ರಾಜಸ್ಥಾನದ ಪಟ್ಟಣಕ್ಕೆ ಬರುತ್ತಾರೆ. ಇಕ್ಕಟ್ಟಾದ ತರಗತಿ ಕೊಠಡಿಗಳಲ್ಲಿದ್ದು ತರಗತಿಗಳಿಗೆ ಹಾಜರಾಗುತ್ತಾರೆ.
ಇದನ್ನೂ ಓದಿ: Kota Suicides: ʼಕೋಟಾ ಸೂಸೈಡ್ ಫ್ಯಾಕ್ಟರಿʼ; ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಆತ್ಮಹತ್ಯೆ, 2 ತಿಂಗಳಲ್ಲಿ 11 ಸಾವು