Site icon Vistara News

Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಇರೋ ಜೈಲಲ್ಲಿ ಮೊಬೈಲ್‌, ಕ್ಯಾಮೆರಾ ಪತ್ತೆ!

Amritpal Singh

Spy Cam, Mobile, Bluetooth Device Recovered from Khalistani Leader Amritpal Singh's Cell in Assam

ದಿಸ್ಪುರ: ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್‌ಪಾಲ್‌ ಸಿಂಗ್‌ನನ್ನು (Amritpal Singh) ಅಸ್ಸಾಂ ಜೈಲಿನಲ್ಲಿ (Assam Jail) ಇರಿಸಲಾಗಿದ್ದು, ಈತನಿರುವ ಜೈಲಿನ ಕೊಠಡಿಯಲ್ಲಿ ಮೊಬೈಲ್‌, ಸ್ಪೈ ಕ್ಯಾಮ್ ಸೇರಿ ಹಲವು ಎಲೆಕ್ಟ್ರಾನಿಕ್‌ ವಸ್ತುಗಳು ಪತ್ತೆಯಾಗಿವೆ. ಹಾಗಾಗಿ, ಅಮೃತ್‌ಪಾಲ್‌ ಸಿಂಗ್‌ ಜೈಲಿನಲ್ಲಿದ್ದುಕೊಂಡೇ ಪ್ರಭಾವ ಬೀರಿದ್ದು, ಜೈಲಧಿಕಾರಿಗಳ ಕರ್ತವ್ಯ ದಕ್ಷತೆ ಕುರಿತು ಹಲವು ಅನುಮಾನಗಳು ಮೂಡಿವೆ.

ಕಳೆದ ವರ್ಷ ಬಂಧನಕ್ಕೀಡಾಗಿರುವ ಅಮೃತ್‌ಪಾಲ್‌ ಸಿಂಗ್‌ ಹಾಗೂ ಆತನ 9 ಸಹಚರನನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರಿಸಲಾಗಿದೆ. ಈತನಿರುವ ಸೆಲ್‌ನಲ್ಲಿ ಸ್ಪೈ ಕ್ಯಾಮೆರಾ, ಸ್ಮಾರ್ಟ್‌ಫೋನ್‌, ಮೊಬೈಲ್‌ ಫೋನ್‌, ಪೆನ್‌ಡ್ರೈವ್‌ಗಳು, ಬ್ಲ್ಯೂಟೂತ್‌ ಹೆಡ್‌ಫೋನ್‌ಗಳು ಸೇರಿ ಹಲವು ಎಲೆಕ್ಟ್ರಾನಿಕ್‌ ವಸ್ತುಗಳು ಸಿಕ್ಕಿವೆ. ಈ ಕುರಿತು ಅಸ್ಸಾಂ ಡಿಜಿಪಿ ಜಿ.ಪಿ. ಸಿಂಗ್‌ ಅವರು ಮಾಹಿತಿ ನೀಡಿದ್ದು, “ಸೆಲ್‌ನಲ್ಲಿ ಹಲವು ಎಲೆಕ್ಟ್ರಾನಿಕ್‌ ವಸ್ತುಗಳು ದೊರೆತಿವೆ. ಅವುಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ದಿಬ್ರುಗಢ ಜೈಲಿನ ಎನ್‌ಎಸ್‌ಎ ಸೆಲ್‌ನಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಅನಾಮಧೇಯ ವ್ಯಕ್ತಿಗಳು ನೀಡಿದ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲೆಕ್ಟ್ರಾನಿಕ್‌ ಡಿವೈಸ್‌ಗಳು ಪತ್ತೆಯಾಗಿವೆ. ಎನ್‌ಎಸ್‌ಎ ಬ್ಲಾಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೈಲಿನಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಯಾರೀತ? ಏನಿದು ಪ್ರಕರಣ?

ಪಂಜಾಬ್‌ನಲ್ಲಿ ಗಲಭೆಗೆ ಪ್ರಚೋದನೆ, ಲಷ್ಕರೆ ತಯ್ಬಾ ಸೇರಿ ಹಲವು ಉಗ್ರ ಸಂಘಟನೆಗಳ ಜತೆ ನಂಟು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಸೇರಿ ಹಲವು ಪ್ರಕರಣಗಳಲ್ಲಿ ಅಮೃತ್‌ಪಾಲ್‌ ಸಿಂಗ್‌ ಮೋಸ್ಟ್‌ ವಾಂಟೆಡ್‌ ಎನಿಸಿದ್ದಾನೆ. ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ 2022ರ ಕೊನೆಯಲ್ಲಿ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ.

ಇದನ್ನೂ ಓದಿ: Amritpal Singh‌ : ಪಾಕಿಸ್ತಾನದ ಐಎಸ್‌ಐ ಜತೆ ಅಮೃತ್‌ಪಾಲ್‌ ಸಿಂಗ್‌ ಲಿಂಕ್‌ ಬಗ್ಗೆ ತನಿಖೆ ಚುರುಕು

ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಇದಾದ ಬಳಿಕ ಅಮೃತ್‌ಪಾಲ್‌ ಸಿಂಗ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಆರಂಭಿಸಿದ. ಕೊನೆಗೆ 2023ರ ಏಪ್ರಿಲ್‌ನಲ್ಲಿ ಈತನನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version