ಕೊಲಂಬೊ: ಚೀನಾದ ಸಂಶೋಧನಾ ನೌಕೆ Yuan Wang 5 (ಯುವಾನ್ ವಾಂಗ್ 5) ಶ್ರೀಲಂಕಾಕ್ಕೆ ಬರುವುದು ಖಚಿತವಾಗಿದೆ. ಈ ನೌಕೆ ಶ್ರೀಲಂಕಾಕ್ಕೆ ಬಂದು ಶಾಶ್ವತ ಲಂಗರು ಹಾಕಿದರೆ, ನಮ್ಮ ಭದ್ರತೆಗೂ ಆತಂಕ ತಪ್ಪಿದ್ದಲ್ಲ ಎಂದು ಭಾರತ ಕಳವಳ ವ್ಯಕ್ತಪಡಿಸಿದ್ದಾಗ್ಯೂ, ಚೀನಾದ ಸಂಶೋಧನಾ ನೌಕೆ ಇಲ್ಲಿನ ಹಂಬನ್‌ಟೋಟ ಬಂದರನ್ನು ತಲುಪಲು ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ. ಅಂದಹಾಗೇ, ಯುವಾನ್ ವಾಂಗ್ 5ನ್ನು ಚೀನಾ ಸಂಶೋಧನಾ ಮತ್ತು ಸಮೀಕ್ಷಾ ನೌಕೆ ಎಂದು ಹೇಳಿಕೊಂಡಿದ್ದರೂ, ಅದು ವಾಸ್ತವದಲ್ಲಿ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯ ಅಡಿಯಲ್ಲಿ ಬರುವ ಒಂದು ಬೇಹುಗಾರಿಕಾ ನೌಕೆ. ಅಪಾರ ಪ್ರಮಾಣದ ಬೇಹುಗಾರಿಕಾ ಸಾಮಗ್ರಿಗಳನ್ನು ಹೊತ್ತಿರುವ ಇದು ಬರುತ್ತಿರುವುದು ಶ್ರೀಲಂಕಕ್ಕೇ ಆದರೂ, ಮುಖ್ಯ ಟಾರ್ಗೆಟ್ ಭಾರತವೇ ಆಗಿದೆ. ಹಾಗಾಗಿಯೇ ಭಾರತ ಈ ನೌಕೆ ಶ್ರೀಲಂಕಾ ಪ್ರವೇಶವನ್ನು ವಿರೋಧಿಸಿತ್ತು.
ಯುವಾನ್ ವಾಂಗ್ ನೌಕೆ ಜುಲೈ 13ರಂದು ಚೀನಾವನ್ನು ಬಿಟ್ಟಿದೆ. ಆಗಸ್ಟ್ 11ಕ್ಕೇ ಶ್ರೀಲಂಕಾದ ಹಂಬನ್‌ಟೋಟ ಬಂದರು ತಲುಪಬೇಕಿತ್ತು. ಆದರೆ ಆಗಸ್ಟ್ ಮೊದಲವಾರದಲ್ಲಿ ಶ್ರೀಲಂಕಾ ವಿದೇಶಾಂಗ ಇಲಾಖೆ ಬೀಜಿಂಗ್ ಸರ್ಕಾರಕ್ಕೆ ‘ನಿಮ್ಮ ಹಡಗನ್ನು ಸದ್ಯದ ಮಟ್ಟಿಗೆ ನಮ್ಮ ಬಂದರಿಗೆ ತರಬೇಡಿ’ ಎಂದು ಹೇಳಿತ್ತು. ಚೀನಾ ಬೇಹುಗಾರಿಕಾ ನೌಕೆಯಿಂದ ತಮ್ಮ ಭದ್ರತಾ ವ್ಯವಸ್ಥೆಗೆ ಅಪಾಯ ಎಂದರಿತಿದ್ದ ಭಾರತ ಅದಾಗಲೇ ಕೊಲಂಬೋ ಮೇಲೆ ಒತ್ತಡ ಹಾಕುತ್ತಿತ್ತು. ಹೀಗಾಗಿ ಶ್ರೀಲಂಕಾ ಸ್ವಲ್ಪ ಧೈರ್ಯ ಮಾಡಿ ಬಂದರಿಗೆ ಬರಬೇಡಿ ಎಂದು ಚೀನಾಕ್ಕೆ ಸೂಚಿಸಿತ್ತು. ‘ನಾವು ಭಾರತದೊಂದಿಗೆ ಮಾತುಕತೆ ನಡೆಸಬೇಕಿದೆ. ಅಲ್ಲಿಯವರೆಗೆ ಪ್ರವೇಶಿಸಬೇಡಿ’ ಎಂದು ಕೇಳಿಕೊಂಡಿತ್ತು.
‘ಚೀನಾದ ಬೇಹುಗಾರಿಕಾ ನೌಕೆ ಪ್ರವೇಶಕ್ಕೆ ಅವಕಾಶ ಕೊಡಬೇಡಿ ಎಂದು ಹೇಳುತ್ತಿರುವ ಭಾರತ, ಯಾಕೆ ಕೊಡಬಾರದು ಎಂಬ ಪ್ರಶ್ನೆಗೆ ಸ್ಪಷ್ಟ ವಿವರ ನೀಡುತ್ತಿಲ್ಲ. ನಾವೊಪ್ಪುವಂತ, ತೃಪ್ತಿದಾಯಕವಾದ ಉತ್ತರ ಭಾರತದಿಂದ ಸಿಗುತ್ತಿಲ್ಲ. ಹೀಗಾಗಿ ನಾವು ಚೀನಾದ ಸಂಶೋಧನಾ ನೌಕೆ ಹಂಬನ್‌ಟೋಟ ಬಂದರಿಗೆ ಬರಲು ಒಪ್ಪಿಗೆ ನೀಡಿದ್ದೇವೆ’ ಎಂದು ಅಲ್ಲಿನ ಸರ್ಕಾರದ ಮೂಲಗಳು ತಿಳಿಸಿವೆ. ಈ ಬಗ್ಗೆ ಶ್ರೀಲಂಕಾ ಬಂದರು ಮಾಸ್ಟರ್ ನಿರ್ಮಲ್ ಪಿ ಸಿಲ್ವಾ ಪ್ರತಿಕ್ರಿಯೆ ನೀಡಿ, ‘ಆಗಸ್ಟ್ 16-22ರ ಅವಧಿಯಲ್ಲಿ ಯಾವಾಗ ಬೇಕಾದರೂ ಹಂಬಾನ್ಟೋಟಾ ಬಂದರಿಗೆ ನೌಕೆ ಬರಬಹುದು, ಅದು ಬಂದರು ಪ್ರವೇಶಿಸಲು ಅನುಮತಿ ಕೊಡಬೇಕು ಎಂಬ ಸೂಚನೆಯನ್ನು ನಾನು ಶ್ರೀಲಂಕಾ ವಿದೇಶಾಂಗ ವ್ಯವಹಾರ ಇಲಾಖೆಯಿಂದ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತಕ್ಕೇನು ಆತಂಕ?
4 ಹೈ ಪವರ್ ಪ್ಯಾರಾಬೋಲಿಕ್ ಟ್ರ್ಯಾಕಿಂಗ್ ಆಂಟೆನ್ನಾಗಳನ್ನು ಹೊಂದಿರುವ ಈ ನೌಕೆಯು ಭಾರತ ಉಪಖಂಡದ ಮೇಲಿರುವ ತನ್ನ ಸ್ಯಾಟ್‌ಲೈಟ್‌ಗಳಿಂದ ಭಾರತದ ದಕ್ಷಿಣದಲ್ಲಿರುವ ಅನೇಕ ವ್ಯೂಹಾತ್ಮಕ ಪ್ರಾಮುಖ್ಯದ ಸ್ಥಳಗಳ ಮೇಲೆ ಕಣ್ಣಿಡಬಲ್ಲುದು. ವಿಶಾಖಪಟ್ಟಣದ ಸಬ್‌ಮರೀನ್ ನೆಲೆ, ಶ್ರೀಹರಿಕೋಟದ ರಾಕೆಟ್ ಉಡಾವಣೆ ಕೇಂದ್ರ, ಕಲ್ಪಾಕಂ, ಕೂಡಂಕುಳಂ, ಒಡಿಶಾದ ಚಂಡೀಪುರ ಡಿಆರ್‌ಡಿಒ ಪ್ರಯೋಗ ಕೇಂದ್ರ, ಕೈಗಾ ಮುಂತಾದ ಪರಮಾಣು ವಿದ್ಯುತ್ ನೆಲೆಗಳು ಕೂಡ ಈ ನೌಕೆಯ ಸ್ಯಾಟ್‌ಲೈಟ್ ವೀಕ್ಷಣೆಯ ವಲಯದಲ್ಲಿ ಬರಲಿವೆ. ಚೀನಾದ ಮುಖ್ಯ ನೆಲದಿಂದ ಉಡಾಯಿಸಿಬಿಟ್ಟ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸ್ಯಾಟ್‌ಲೈಟ್ ಟ್ರ್ಯಾಕಿಂಗ್ ನಡೆಸಬಲ್ಲದು. ಭಾರತದ ಪೂರ್ವ- ಪಶ್ಚಿಮ- ದಕ್ಷಿಣ ಕರಾವಳಿಯಲ್ಲಿ ಓಡಾಡುವ ವ್ಯೂಹಾತ್ಮಕ ಪ್ರಾಮುಖ್ಯದ ನೌಕೆಗಳ ಮೇಲೆ ಕಣ್ಣಿಡುತ್ತದೆ. ಮಾತ್ರವಲ್ಲ ಭಾರತದ ಸಬ್‌ಮರೀನ್‌ಗಳನ್ನೂ ಟ್ರ್ಯಾಕ್ ಮಾಡಬಲ್ಲದು. ಇದೇ ಕಾರಣಕ್ಕೆ ಭಾರತ ಈ ನೌಕೆ ಶ್ರೀಲಂಕಾ ಪ್ರವೇಶಿಸುವುದನ್ನು ವಿರೋಧಿಸುತ್ತಿದೆ.
ಇದನ್ನೂ ಓದಿ: ವಿಸ್ತಾರ Explainer | ತೈವಾನ್ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು