Site icon Vistara News

Nagaland Meghalaya Election: ಸೋಮವಾರ ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ, ಬಲಾಬಲ ಹೇಗಿದೆ?

Nagaland Meghalaya Election

ನಾಗಾಲ್ಯಾಂಡ್‌, ಮೇಘಾಲಯ ಚುನಾವಣೆ

ಶಿಲ್ಲಾಂಗ್‌/ಕೊಹಿಮಾ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಮೇಘಾಲಯ ಹಾಗೂ ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ (Nagaland Meghalaya Election) ಸೋಮವಾರ ನಡೆಯಲಿದೆ. ಗೆಲುವಿಗಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸನ್ನದ್ಧವಾಗಿದ್ದು, ಶಾಂತಿಯುತವಾಗಿ ಮತದಾನ ನಡೆಸಲು ಚುನಾವಣೆ ಆಯೋಗವೂ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ನಾಗಾಲ್ಯಾಂಡ್‌ನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ

ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಇದೆ. ಅದರಂತೆ, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್‌ ಪಕ್ಷ (NDPP)ದ ನೆಫಿಯು ರಿಯೋ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವೈ. ಪ್ಯಾಟ್ಟೊನ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ೩0 ಮ್ಯಾಜಿಕ್‌ ನಂಬರ್‌ ಆಗಿದೆ.

ಕಳೆದ ಬಾರಿ ಹೆಚ್ಚು ಸ್ಥಾನ ಗೆದ್ದ ಪಕ್ಷ ಎನಿಸಿದರೂ ಸರ್ಕಾರ ರಚಿಸಲು ಆಗದ ನಾಗಾ ಪೀಪಲ್ಸ್‌ ಫ್ರಂಟ್‌ ಈ ಬಾರಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟು ೬೦ ವಿಧಾನಸಭೆ ಕ್ಷೇತ್ರಗಳಿದ್ದರೂ ಅಕುಲುಟೊ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಕಜೇಟೊ ಕಿಣಿಮಿ ಅವರು ಅವಿರೋಧವಾಗಿ ಆಯ್ಕೆಯಾದ ಕಾರಣ ೫೯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

2018ರ ಚುನಾವಣೆ ಫಲಿತಾಂಶ

ಪಕ್ಷ ಗೆದ್ದ ಸ್ಥಾನ

ಎನ್‌ಪಿಎಫ್‌ ೨೬

ಬಿಜೆಪಿ ೧೨

ಇತರೆ ೨೨

ಮೇಘಾಲಯದಲ್ಲಿ ಚತುಷ್ಕೋನ ಸ್ಪರ್ಧೆ

ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಬಿಜೆಪಿಯು ಆಡಳಿತಾರೂಢ ಮೈತ್ರಿ (ಮೇಘಾಲಯ ಡೆಮಾಕ್ರಟಿಕ್‌ ಅಲಯನ್ಸ್)‌ ಪಕ್ಷದ ಸದಸ್ಯವಾದರೂ ಇಲ್ಲಿ ಪ್ರಾಬಲ್ಯವಿಲ್ಲ. ನ್ಯಾಷನಲ್‌ ಪೀಪಲ್ಸ್‌ ಪಕ್ಷದ ಕಾನ್ರಾಡ್‌ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್‌, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NPP) ಹಾಗೂ ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ಇದೆ.

ಯಾವುದೇ ಚುನಾವಣೆಪೂರ್ವ ಮೈತ್ರಿ ಇಲ್ಲದೆ ನಾಲ್ಕು ಪಕ್ಷಗಳ ಮಧ್ಯೆ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬೃಹತ್‌ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಆಗದ ಕಾಂಗ್ರೆಸ್‌ ಈ ಬಾರಿ ಗೆದ್ದೇ ತೀರುವ ವಿಶ್ವಾಸದಲ್ಲಿದೆ. ಇಲ್ಲೂ ಒಟ್ಟು ೬೦ ಕ್ಷೇತ್ರಗಳಿದ್ದರೂ ಸೋಹಿಯೋಂಗ್‌ ಕ್ಷೇತ್ರದ ಶಾಸಕ ನಿಧನ ಹೊಂದಿದ ಕಾರಣ ಈ ಕ್ಷೇತ್ರದಲ್ಲಿ ಚುನಾವಣೆ ಚುನಾವಣೆ ನಡೆಯುತ್ತಿಲ್ಲ. ಉಳಿದ ೫೯ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Delhi MCD: ದೆಹಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಮರು ಚುನಾವಣೆಗೆ ಹೈಕೋರ್ಟ್​​ನಿಂದ ತಡೆ; ಆಮ್​ ಆದ್ಮಿ ಪಕ್ಷಕ್ಕೆ ಹಿನ್ನಡೆ

2018ರ ಚುನಾವಣೆ ಫಲಿತಾಂಶ

ಪಕ್ಷ ಗೆದ್ದ ಸ್ಥಾನ

ಕಾಂಗ್ರೆಸ್‌ ೨೧

ಎನ್‌ಪಿಪಿ ೨೦

ಬಿಜೆಪಿ ೦೨

ಇತರೆ ೧೭

ಈಗಾಗಲೇ ತ್ರಿಪುರ ವಿಧಾನಸಭೆ ಚುನಾವಣೆ ಮುಗಿದಿದೆ. ಸೋಮವಾರ ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲೂ ಮತದಾನ ಮುಗಿಯಲಿದ್ದು, ಮೂರೂ ರಾಜ್ಯಗಳ ಚುನಾವಣೆ ಫಲಿತಾಂಶ ಮಾರ್ಚ್‌ ೨ರಂದು ಪ್ರಕಟವಾಗಲಿದೆ.

Exit mobile version