ನವ ದೆಹಲಿ: ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೂತನ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ಮುಂದುವರಿದಿದ್ದು, ಸೋಮವಾರ ಕೆಲ ಗುಂಪುಗಳು ಭಾರತ ಬಂದ್‌ಗೆ ಕರೆ ನೀಡಿವೆ.
ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸೇನಾ ಮುಖ್ಯಸ್ಥರು ಭಾನುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಭಟನಾಕಾರರು ಭಾರತ ಬಂದ್ ನಡೆಸಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸೇರದಂತೆ ಭದ್ರತಾ ಪಡೆ ಹೈ ಅಲರ್ಟ್‌ನಲ್ಲಿದೆ. ಮುಖ್ಯವಾಗಿ ಬಿಹಾರ, ಪಂಜಾಬ್, ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ರಾಜ್ಯಗಳಲ್ಲಿ ಕಳೆದ ವಾರ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು.
ಬಂದ್ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಂಜಾಬ್‌ನಲ್ಲೂ ಹೈ ಅಲರ್ಟ್ ವಹಿಸಲಾಗಿದೆ. ಲುಧಿಯಾನದಲ್ಲಿ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣಕ್ಕೆ ದಾಳಿ ನಡೆಸಿದ್ದರು.
ಉತ್ತರ ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಬಂದ್ ಪರಿಣಾಮ ನಾನ್ನೂರಕ್ಕೂ ಹೆಚ್ಚು ರೈಲುಗಳ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಕರ್ನಾಟಕದ ಬೆಳಗಾವಿಯಲ್ಲೂ ಪ್ರತಿಭಟನೆ ನಡೆಯುವ ನಿರೀಕ್ಷೆ ಇದೆ. ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲಿಸಿದೆ.