ನವದೆಹಲಿ: ಶಿಕ್ಷಣ, ಸಂಶೋಧನೆಗಿಂತ ಪ್ರತಿಭಟನೆ, ಗದ್ದಲ, ಗಲಾಟೆಗಳಿಂದಲೇ ಸುದ್ದಿಯಲ್ಲಿರುವ ದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ಮಂಗಳವಾರ ರಾತ್ರಿ ಗಲಾಟೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಕ್ಷೇಪಾರ್ಹವಾಗಿ ಚಿತ್ರಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ (India: The Modi Question) ಬಿಬಿಸಿ ಡಾಕ್ಯುಮೆಂಟರಿಯನ್ನು (BBC Documentary On Modi) ವಿವಿ ಕ್ಯಾಂಪಸ್‌ನಲ್ಲೇ ದೊಡ್ಡ ಪರದೆಯಲ್ಲಿ ವೀಕ್ಷಿಸುವಾಗ ವಿದ್ಯುತ್ ಕಡಿತವಾಗಿದೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ವಿವಿಯ ವಿದ್ಯಾರ್ಥಿ ಸಂಘಟನೆಯ ನೂರಾರು ಕಾರ್ಯಕರ್ತರು ಡಾಕ್ಯುಮೆಂಟರಿ ವೀಕ್ಷಣೆಯ ಶೋ ಆಯೋಜಿಸಿದ್ದಾರೆ. ಸ್ಕ್ರೀನಿಂಗ್‌ಗೆ ವಿವಿ ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ. ಹಾಗೆಯೇ, ಆಯೋಜಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಹೀಗಿದ್ದರೂ, ಎಲ್ಲರೂ ಕುಳಿತು ಡಾಕ್ಯುಮೆಂಟರಿ ವೀಕ್ಷಿಸುವಾಗಲೇ ವಿವಿ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಕೆರಳಿದ್ದು, ಗಲಾಟೆ ಆರಂಭಿಸಿದ್ದಾರೆ. ಕಲ್ಲು ತೂರಾಟ ಮಾಡುವ ಮೂಲಕ ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ವಿವಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ವೀಕ್ಷಣೆ
ವಿಶ್ವವಿದ್ಯಾಲಯದಲ್ಲಿ ಡಾಕ್ಯುಮೆಂಟರಿ ವೀಕ್ಷಿಸುವಾಗಲೇ ವಿದ್ಯುತ್ ಕಡಿತಗೊಂಡ ಕಾರಣ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿಯೇ ಸಾಕ್ಷ್ಯಚಿತ್ರ ವೀಕ್ಷಿಸಿದರು. ಮೊಬೈಲ್, ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿರುವ ಫೋಟೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ | BBC Documentary On Modi: ಪ್ರದರ್ಶನಕ್ಕೆ ಮುಂದಾದ ಜೆಎನ್‌ಯು ವಿದ್ಯಾರ್ಥಿಗಳು, ಹೈದರಾಬಾದ್ ವಿವಿಯಲ್ಲಿ ಶೋ