ಒಟ್ಟಾವ: “ಸ್ಲಮ್ ಡಾಗ್ ಮಿಲಿಯನೇರ್” ಚಿತ್ರದ ಮೂಲಕ ಜಗತ್ತಿಗೆ ಭಾರತೀಯ ಚಿತ್ರರಂಗದ ಮತ್ತೊಂದು ಮಗ್ಗಲು ಪರಿಚಯಿಸಿದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (AR Rahman) ಅವರಿಗೆ ಕೆನಡಾ ಸರಕಾರವು ವಿಶೇಷ ಗೌರವ ನೀಡಿದೆ. ಕೆನಡಾದ ರಸ್ತೆಯೊಂದಕ್ಕೆ ರೆಹಮಾನ್ ಅವರ ಹೆಸರಿಡುವ ಮೂಲಕ ಸಂಗೀತ ಸಾಧಕನಿಗೆ ಗೌರವ ಸಲ್ಲಿಸಿದೆ.
ಕೆನಡಾದ ಮರ್ಖಾಮ್ ನಗರದಲ್ಲಿರುವ ರಸ್ತೆಯೊಂದಕ್ಕೆ ಇವರ ಹೆಸರಿಡಲಾಗಿದೆ. ಇದರ ಕುರಿತು ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ರೆಹಮಾನ್, “ಇಂತಹ ಗೌರವದಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಮತ್ತಷ್ಟು ಶ್ರಮವಹಿಸಿ ಕೆಲಸ ಮಾಡಲು ಸ್ಫೂರ್ತಿ ನೀಡಿದೆ. ನಾನು ನಿವೃತ್ತಿ ಹೊಂದದೆ ಮತ್ತಷ್ಟು ಕೆಲಸದಲ್ಲಿ ತೊಡಗಲು ನೆರವಾಗುತ್ತದೆ. ನಾನು ನಿವೃತ್ತಿ ಹೊಂದಿದರೂ ಇನ್ನಷ್ಟು ಕೆಲಸ ಮಾಡಬೇಕು ಹಂಬಲ ಹೆಚ್ಚಾಗುತ್ತದೆ. ಮತ್ತಷ್ಟು ಜನರನ್ನು ಸಂಪರ್ಕಿಸಲು, ಅವರೊಡನೆ ಒಡನಾಡಲು ಇಂಬು ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಕೆನಡಾದಿಂದ ಗೌರವ ಸ್ವೀಕರಿಸಲು ಎ.ಆರ್.ರೆಹಮಾನ್ ಅವರು ಮರ್ಖಾಮ್ ನಗರಕ್ಕೆ ತೆರಳಿದ್ದರು. ಈ ವೇಳೆ ಮರ್ಖಾಮ್ ನಗರದ ಮೇಯರ್ ಫ್ರ್ಯಾಂಕ್ ಸ್ಕಾರ್‌ಪಿಟ್ಟಿ, ಭಾರತದ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು