ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡಂತಿರುವ ಹಲವು ನಗರಗಳಲ್ಲಿ ಶುಕ್ರವಾರ r ರಾತ್ರಿ (ನವೆಂಬರ್ 3) ಪ್ರಬಲ ಭೂಕಂಪ (Delhi Earthquake) ಸಂಭವಿಸಿದೆ. ನೇಪಾಳದಲ್ಲಿ ಭಾರಿ ಪ್ರಮಾಣದ ಭೂಕಂಪ (Earthquake In Nepal) ಸಂಭವಿಸಿದ ಕಾರಣ ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದುಬಂದಿದೆ.
“ನೇಪಾಳದಲ್ಲಿ ಶುಕ್ರವಾರ ರಾತ್ರಿ 11.32ರ ಸುಮಾರಿಗೆ ನೇಪಾಳದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದೆ. ಇದರಿಂದಾಗಿ ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ” ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ. ಕೆಲ ತಿಂಗಳಷ್ಟೇ ದೆಹಲಿ ಸೇರಿ ಸುತ್ತಮುತ್ತಲಿನ ನಗರಗಳಲ್ಲಿ ಭೂಕಂಪ ಸಂಭವಿಸಿತ್ತು.
Earthquake of Magnitude 6.4 strikes Nepal: National Center for Seismology
— ANI (@ANI) November 3, 2023
Strong tremors felt in Delhi pic.twitter.com/iz1OGy44cG
ಭೂಮಿ ಕಂಪಿಸಿದ ಅನುಭವವಾಗುತ್ತಲೇ ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳ ಜನ ಮನೆಯಿಂದ ಹೊರಗೆ ಬಂದರು. ಮನೆಯಲ್ಲಿರುವ ಫ್ಯಾನ್ ಸೇರಿ ಹಲವು ವಸ್ತುಗಳು ಅಲುಗಾಡುತ್ತಲೇ ಜನ ಆತಂಕ್ಕೀಡಾದರು. ಹಲವೆಡೆ ಇನ್ನೂ ಒಂದಷ್ಟು ಜನ ಮನೆಯೊಳಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಭೂಕಂಪದಿಂದ ಯಾವುದೇ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Afghan Earthquake: ಅಫಘಾನಿಸ್ತಾನದಲ್ಲಿ ಸರಣಿ ಭೂಕಂಪ, ಮೃತರ ಸಂಖ್ಯೆ 2000ಕ್ಕೆ ಏರಿಕೆ
ಕಳೆದ ತಿಂಗಳು ಅಫಘಾನಿಸ್ತಾನದ ಹೆರಾತ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ 2 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿತ್ತು. ತಾಲಿಬಾನ್ (Taliban Administration) ಆಡಳಿತದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಅಫಘಾನಿಸ್ತಾನಕ್ಕೆ ಈ ಭೂಕಂಪವು ಭಾರೀ ಹೊಡೆತ ನೀಡಿತ್ತು.
ಹೆರಾತ್ ಪ್ರಾಂತ್ಯದಲ್ಲಿ 12 ಹಳ್ಳಿಗಳು ಸಂಪೂರ್ಣ ಅಥವಾ ಭಾಗಶಃ ನಾಶವಾಗಿದ್ದವು. 600 ಮನೆಗಳು ನೆಲಸಮವಾಗಿದ್ದವು. ಇದರಿಂದಾಗಿ ಸುಮಾರು 4200 ಜನರು ಭೂಕಂಪಪೀಡಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಮೊದಲನೇ ಭೂಕಂಪ ಸಂಭವಿಸಿದಾಗಲೇ ಎಲ್ಲ ಮನೆಗಳು ಕುಸಿದು ಬಿದ್ದವು ಎಂದು 42 ವರ್ಷದ ಬಶೀರ್ ಅಹ್ಮದ್ ಅವರು ತಿಳಿಸಿದ್ದರು. ಮನೆಗಳ ಒಳಗೆ ಇದ್ದವರೆಲ್ಲರೂ ನೆಲಸಮಾಧಿಯಾಗಿದ್ದರು. ಕೆಲವು ಕುಟುಂಬಗಳು ಕಾಣೆಯಾಗಿವೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದರು.