ಮುಂಬೈ: ನಗರದ ಪೊವೈನಲ್ಲಿರುವ ಬಾಂಬೆ ಐಐಟಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನ ಏಳನೇ ಮಹಡಿಯಿಂದ ಜಿಗಿದು ೧೮ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದರ್ಶನ್ ಸೋಲಂಕಿ ಮೃತ ವಿದ್ಯಾರ್ಥಿ. ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಬೇರೆ ಜಾತಿ ವಿದ್ಯಾರ್ಥಿಗಳು ಹಾಗೂ ದಲಿತ ವಿದ್ಯಾರ್ಥಿಗಳ ಮಧ್ಯೆ ಜಾತಿ ತಾರತಮ್ಯ ಮಾಡುತ್ತಿರುವುದರಿಂದ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
“ಬಿ ಟೆಕ್ ವಿದ್ಯಾರ್ಥಿಯಾದ ದರ್ಶನ್ ಸೋಲಂಕಿಯು ಅಹಮದಾಬಾದ್‌ನವನಾಗಿದ್ದಾನೆ. ಆತ, ಮೂರು ತಿಂಗಳ ಹಿಂದೆಯಷ್ಟೇ ಕೋರ್ಸ್‌ಗೆ ಸೇರಿದ್ದು, ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ದರ್ಶನ್ ಸೋಲಂಕಿ ಬಳಿ ಡೆತ್‌ನೋಟ್ ಪತ್ತೆಯಾಗಿಲ್ಲ. ಆದರೂ, ವಿದ್ಯಾರ್ಥಿಯ ಆತ್ಮಹತ್ಯೆಗೆ ಯಾವ ರೀತಿಯ ಒತ್ತಡವಿತ್ತು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಪೊವೈ ಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಸಾವಿಗೆ ಸಂಸ್ಥೆಯು ಸಂತಾಪ ಸೂಚಿಸಿದೆ.
ಜಾತಿ ತಾರತಮ್ಯದ ಆರೋಪ
“ಬಾಂಬೆ ಐಐಟಿ ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನೋಡಲಾಗುತ್ತಿದೆ. ಇದರ ಕುರಿತು ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿಯೂ ವೈಯಕ್ತಿಕ ಕಾರಣಗಳಿಂದ ಅಲ್ಲ, ಸಾಂಸ್ಥಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಆರೋಪಿಸಿದೆ.
ಇದನ್ನೂ ಓದಿ: Murder Case: ಜಮೀನಿನಲ್ಲಿ ಹೆಂಡತಿಯ ಕೊಂದು, ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪತಿ