ಬಾಗೇಶ್ವರ್: ಉತ್ತರಖಾಂಡ್‌ನ ಬಾಗೇಶ್ವರ್ ಜಿಲ್ಲೆಯಲ್ಲಿರುವ ರೈಖಿಲಿ ಎಂಬ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಚಿತ್ರ ಸಮಸ್ಯೆ ಎದುರಾಗಿದೆ. ಅದನ್ನು ನೋಡಿ ಪಾಲಕರು, ಶಾಲಾ ಶಿಕ್ಷಕರು, ಆಡಳಿತ ಮಂಡಳಿ, ಊರವರೆಲ್ಲ ಆತಂಕಕ್ಕೀಡಾಗಿದ್ದಾರೆ. ಮಕ್ಕಳೆಲ್ಲ ದೊಡ್ಡದಾಗಿ ಕಿರುಚುತ್ತ, ಕೂಗಾಡುತ್ತಿದ್ದಾರೆ. ತಲೆ ಬಡಿದುಕೊಂಡು ಭಯಂಕರವಾಗಿ ಅಳುತ್ತಿದ್ದಾರೆ. ಇವರೆಲ್ಲ ಸಾಮೂಹಿಕ ಹಿಸ್ಟೀರಿಯಾಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ವಿಲಕ್ಷಣವಾಗಿ ವರ್ತಿಸುತ್ತಿರುವವರಲ್ಲಿ ಬಹುಪಾಲು ಹೆಣ್ಣು ಮಕ್ಕಳೇ ಆಗಿದ್ದಾರೆ. ಕ್ಲಾಸ್ ರೂಮಿನಿಂದ ಹೊರಗೆ ಬಂದು, ನೆಲದ ಮೇಲೆ ಹೊರಳಾಡುತ್ತ, ಕಿರುಚುವ ಅಸಹಜ ದೃಶ್ಯಗಳು ಕಂಡು ಬಂದಿವೆ. ಇವೆಲ್ಲ ಹಿಸ್ಟೀರಿಯಾ (ಸನ್ನಿ) ರೋಗದ ಲಕ್ಷಣಗಳೇ ಆಗಿವೆ.
ಅಂದಹಾಗೇ, ಈ ಸನ್ನಿವೇಶ ಕಂಡುಬಂದಿದ್ದು ಜ್ಯೂನಿಯರ್ ಹೈಸ್ಕೂಲ್‌ನಲ್ಲಿ. ಅದರ ಮುಖ್ಯ ಶಿಕ್ಷಕಿ ವಿಮಲಾ ದೇವಿ ಮಾತನಾಡಿ, ʼನಮ್ಮ ಶಾಲೆಯ ಮಕ್ಕಳಲ್ಲಿ ಮೊದಲು ಇಂಥ ವರ್ತನೆ ಕಂಡು ಬಂದಿದ್ದು ಮಂಗಳವಾರ (ಜು.26). ಕೆಲವು ಹುಡುಗರು ಮತ್ತು ಹುಡುಗಿಯರು ಹೀಗೆ ಏಕಾಏಕಿ ಕಿರುಚಿ, ಅಳಲು ಪ್ರಾರಂಭಿಸಿದರು. ಅವರನ್ನು ನಿಯಂತ್ರಿಸಲು ಸಾಧ್ಯವಾಗದೆ ಅವರ ಪಾಲಕರಿಗೆ ಕರೆ ಮಾಡಿದೆವು. ಮಕ್ಕಳ ಸ್ಥಿತಿಯನ್ನು ನೋಡಿ ಭಯಗೊಂಡ ತಂದೆ-ತಾಯಿ ಸ್ಥಳೀಯ ದೇಗುಲದ ಅರ್ಚಕರನ್ನು ಕರೆಸಿದರು. ಬಳಿಕ ಎಲ್ಲ ಸೇರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬುಧವಾರ ಒಂದಿನ ಏನೂ ಆಗಲಿಲ್ಲ. ಆದರೆ ಮತ್ತೆ ಗುರುವಾರ ಒಂದಷ್ಟು ಮಕ್ಕಳು ಮತ್ತೆ ಇದೇ ರೀತಿ ವರ್ತನೆ ಮಾಡಿದರು. ಹಾಗಾಗಿ ನಾವು ಪಾಲಕರನ್ನು ಮತ್ತು ವೈದ್ಯರನ್ನು ಶಾಲೆಗೆ ಕರೆಸಿದೆವುʼ ಎಂದು ಮಾಹಿತಿ ನೀಡಿದ್ದಾರೆ.
ಹೀಗೆ ಮಕ್ಕಳು ಪ್ರತಿದಿನ ಹಿಸ್ಟೀರಿಯಾಕ್ಕೆ ಒಳಗಾದಂತೆ ವರ್ತಿಸುವುದನ್ನು ನೋಡಿದ ಪಾಲಕರು ತಾವು, ಶಾಲೆಯ ಆವರಣದೊಳಗೆ ಪೂಜೆ ಮಾಡಿಸುತ್ತೇವೆ. ಈ ಶಾಲೆ ತುಂಬ ಹಳೆಯದಾಗಿದ್ದು, ಏನೋ ದೋಷ ಉಂಟಾಗಿದೆ. ನಾವದಕ್ಕೆ ಒಪ್ಪಿದ್ದೇವೆ. ಶಾಲೆಯಲ್ಲಿ ಮಕ್ಕಳ ಸ್ಥಿತಿ ಸಹಜತೆಗೆ ಮರಳು ನಾವು ಏನು ಮಾಡಲೂ ಸಿದ್ಧರಿದ್ದೇವೆ. ವೈದ್ಯರ ಬಳಿಯೂ ಸಮಾಲೋಚನೆ ನಡೆಸಲಾಗಿದೆ ಎಂದು ವಿಮಲಾ ದೇವಿ ತಿಳಿಸಿದ್ದಾರೆ.
ಅಂದಹಾಗೇ, ಸಾಮೂಹಿಕ ಹಿಸ್ಟೀರಿಯಾ ಅಥವಾ ಸಮೂಹ ಸನ್ನಿ ಎಂಬುದು ಮಾನಸಿಕ ರೋಗವಾಗಿದೆ. ಈ ಕಾಯಿಲೆ ಇರುವವರು ಹುಚ್ಚರಂತಾಗುತ್ತಾರೆ. ತಮ್ಮೊಳಗಿನ ತೊಳಲಾಟವನ್ನು ಮಾತಿನ ಮೂಲಕ ಹೇಳಿಕೊಳ್ಳಲಾಗದೆ, ಹೀಗೆ ಕಿರುಚಾಡಿ, ದೊಡ್ಡದಾಗಿ ಅಳುತ್ತ ವ್ಯಕ್ತಪಡಿಸುತ್ತಾರೆ. ಇದು ಅಸಹಜ ನಡವಳಿಕೆಯಾಗಿದೆ.
ಇದನ್ನೂ ಓದಿ: Rain news: ಉತ್ತರಾಖಂಡದಲ್ಲಿ ನದಿಗೆ ಬಿದ್ದು ಕೊಚ್ಚಿ ಹೋದ ಕಾರು, 9 ಪ್ರವಾಸಿಗರು ನೀರುಪಾಲು