Site icon Vistara News

UGC | ನಾಲ್ಕು ವರ್ಷ ಪದವಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಮಾಡಬಹುದು!

UGC Chairman Jagadish Kumar

ನವದೆಹಲಿ: ನಾಲ್ಕು ವರ್ಷದ ಡಿಗ್ರಿ ಓದುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಅಧ್ಯಯನ ಕೈಗೊಳ್ಳಬಹುದು. ಇದಕ್ಕಾಗಿ ಸ್ನಾತಕೋತ್ತರ ಪದವಿ ಪೂರೈಸಬೇಕಾದ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(UGC) ಚೇರ್ಮನ್ ಜಗದೀಶ್ ಕುಮಾರ್ (Jagadesh Kumar) ಅವರು ಹೇಳಿದ್ದಾರೆ. ಮೂರು ವರ್ಷಗಳ ಆನರ್ಸ್ ಪದವಿ ಕಲಿಸಬೇಕಾ ಅಥವಾ ನಾಲ್ಕು ವರ್ಷಗಳ ಪದವಿ ನೀಡಬೇಕಾ ಎಂಬ ಕುರಿತು ವಿಶ್ವವಿದ್ಯಾಲಯಗಳೇ ನಿರ್ಧರಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ, 4 ವರ್ಷದ ಪದವಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೊಳಿಸುವವರೆಗೆ 3 ವರ್ಷದ ಪದವಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಘೋಷಿಸಲಾದ ಪದವಿ ಕೋರ್ಸ್‌ಗಳಿಗೆ ಹೊಸ ಪಠ್ಯಕ್ರಮದ ಚೌಕಟ್ಟಿನಲ್ಲಿ ಆನರ್ಸ್ ಪದವಿ ಕಾರ್ಯಕ್ರಮವನ್ನು ನಾಲ್ಕು ವರ್ಷಗಳ ಕಾರ್ಯಕ್ರಮಗಳು ಎಂದು ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ಮೂರು ವರ್ಷ ಅಥವಾ ನಾಲ್ಕು ವರ್ಷದ ಪದವಿ ಪ್ರೋಗ್ರಾಮ್‌ಗಳ ಬಗ್ಗೆ ನಿರ್ಧರಿಸಬೇಕಾಗಿರುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿ ಎಂದು ಯುಜಿಸಿ ಚೇರ್ಮನ್ನರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಪದವಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಅರ್ಹರಾಗಿರುತ್ತಾರೆ. ಅವರಿಗೆ ಯಾವುದೇ ಮಾಸ್ಟರ್ ಡಿಗ್ರಿ ಅಗತ್ಯವಿರುವುದಿಲ್ಲ ಎಂದು ಜಗದೀಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ನಾಲ್ಕು ವರ್ಷದ ಪದವಿ ಕಾರ್ಯಕ್ರಮಗಳಿಂದ ಸಾಕಷ್ಟು ಲಾಭಗಳಿವೆ. ಪಿಎಚ್‌ಡಿ ಮಾಡಲು ಅವರಿಗೆ ಮಾಸ್ಟರ್ ಮಾಡಬೇಕಾದ ಅಗತ್ಯ ಇರುವುದಿಲ್ಲ. ನೀಡಲಾದ ವಿಷಯಗಳಲ್ಲಿ ಆಳವಾದ ಜ್ಞಾನ ಪಡೆಯಲು ಒಂದು ಅಥವಾ ಎರಡು ವಿಷಯಗಳನ್ನು ಮೇಜರ್ ಆಗಿ ಪಡೆದುಕೊಳ್ಳಬಹುದು. ಬಹುಶಿಸ್ತೀಯ ಕೋರ್ಸ್‌ಗಳು, ಸಾಮರ್ಥ್ಯ ವರ್ಧನೆಯ ಕೋರ್ಸ್‌ಗಳು, ಕೌಶಲ್ಯ ವರ್ಧನೆಯ ಕೋರ್ಸ್‌ಗಳು, ಮೌಲ್ಯವರ್ಧಿತ ಕೋರ್ಸ್‌ಗಳು ಮತ್ತು ಇಂಟರ್ನ್‌ಶಿಪ್‌ಗಳು ನಾಲ್ಕು ವರ್ಷದ ಪದವಿ ಕೋರ್ಸುಗಳಲ್ಲಿ ಅಂತರ್ಗತವಾಗಿರುವುದರಿಂದ, ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಪಡೆದುಕೊಳ್ಳಲು ಅಥವಾ ಉನ್ನತ ವ್ಯಾಸಂಗಕ್ಕೆ ಹೋಗಲು ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Yoga Education | ಧ್ಯಾನ ಶಾಲೆ, ಪಿಯುಗಳಿಗೆ ಸೀಮಿತವಲ್ಲ, ಕಾಲೇಜು ಕ್ಯಾಂಪಸ್‌ಗಳಿಗೂ ವಿಸ್ತರಿಸಿ ಯುಜಿಸಿ ಆದೇಶ

Exit mobile version