Site icon Vistara News

ಮೋದಿಗೆ ರಾಮ ಪೂಜೆ ಮಾಡುವ ಹಕ್ಕಿದೆಯೇ ಎಂದ ಸುಬ್ರಮಣಿಯನ್ ಸ್ವಾಮಿಗೆ ಜಾಡಿಸಿದ ನೆಟ್ಟಿಗರು!

Narendra Modi And Subramanian Swamy

Subramanian Swamy Question Narendra Modi Over Ram Mandir Inauguration; Netizens Attack Swamy

ನವದೆಹಲಿ: ನೇರ ನಡೆ, ದಿಟ್ಟ ಮಾತು, ಯಾರ ಬಗ್ಗೆಯೂ ಟೀಕೆಗಳನ್ನು ವ್ಯಕ್ತಪಡಿಸಲು ಹಿಂಜರಿಯದ ಕಾರಣ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ (Subramanian Swamy) ಅವರು ಅಪಾರ ಅಭಿಮಾನಿಗಳನ್ನೂ, ಬೆಂಬಲಿಗರನ್ನೂ ಹೊಂದಿದ್ದಾರೆ. ಆದರೆ, “ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ರಾಮ ಪೂಜೆ ಮಾಡುವ ಹಕ್ಕಿದೆಯೇ” ಎಂದು ಸುಬ್ರಮಣಿಯನ್‌ ಸ್ವಾಮಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರು ಸುಬ್ರಮಣಿಯನ್ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

“ರಾಜಕೀಯವಾಗಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ನೀವು ಮೋದಿ ಜತೆಗೆ ಇರಬೇಕು. ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ನೀವು ರಾಮಮಂದಿರ ಉದ್ಘಾಟನೆಯ ಸುವರ್ಣ ಘಳಿಗೆಯಲ್ಲಿ ಭಾಗಿಯಾಗಿ. ಶತಮಾನಗಳ ಹೋರಾಟದ ಭಾಗವಾಗಿ ರಾಮಮಂದಿರದ ಕನಸು ನನಸಾಗುತ್ತಿರುವುದು ಅದ್ಭುತವಲ್ಲವೇ” ಎಂದು ದಿವ್ಯಾ ಕಾಮತ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಸುಬ್ರಮಣಿಯನ್‌ ಸ್ವಾಮಿ ಅವರ ಅಭಿಪ್ರಾಯವನ್ನು ಖಂಡಿಸಿದ್ದಾರೆ.

ಗೌತಮ ಬುದ್ಧನೂ ಪತ್ನಿಯನ್ನೂ ತೊರೆದಿದ್ದ!

ಸ್ಟುಡೆಂಟ್‌ ಆಫ್‌ ಸಂಸ್ಕೃತ ಎಂಬ ಖಾತೆಯಿಂದಲೂ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. “ಗೌತಮ ಬುದ್ಧನೂ ಪತ್ನಿಯನ್ನು ತೊರೆದಿದ್ದ. ಸ್ವಾಮಿ ದಯಾನಂದ ಸರಸ್ವತಿಯವರೂ ಪತ್ನಿಯನ್ನು ಬಿಟ್ಟಿದ್ದರು. ಇತಿಹಾಸದುದ್ದಕ್ಕೂ ಇಂತಹ ತ್ಯಾಗಗಳನ್ನು ಸ್ಮರಿಸಲಾಗುತ್ತದೆ. ನಿಮ್ಮಂತಹವರು ಮಾತ್ರ ಇತಿಹಾಸದಲ್ಲಿ ಯಾವುದೇ ಸ್ಥಾನ ಪಡೆಯುವುದಿಲ್ಲ” ಎಂದು ಜಾಡಿಸಲಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ;‌ ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

“ನರೇಂದ್ರ ಮೋದಿ ಅವರ ಬಳಿ ಆಂಜನೇಯನ ಗುಣ ಇದೆ. ಅವರೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯವಾದಿ ಆಗಿದ್ದಾರೆ. ದೇಶದಲ್ಲಿ ರಾಮಮಂದಿರ ಉದ್ಘಾಟಿಸಲು ಎಲ್ಲ ರಾಜಕಾರಣಿಗಳಿಗಿಂತ ಹೆಚ್ಚು ಅರ್ಹತೆಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಅವರು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಮಾಡುವುದನ್ನು ನೋಡಲು ನಾವು ಕಾಯುತ್ತಿದ್ದೇವೆ” ಎಂದು ನಟರಾಜನ್‌ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, “ರಾಮಮಂದಿರ ನಿರ್ಮಾಣದ ಹಿಂದೆ ನರೇಂದ್ರ ಮೋದಿ ಅವರ ಶ್ರಮ ತುಂಬ ಇದೆ. ಅವರೇ ರಾಮಮಂದಿರ ಉದ್ಘಾಟಿಸಬೇಕು” ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ನರೇಂದ್ರ ಮೋದಿ ಅವರೇ ರಾಮಮಂದಿರವನ್ನು ಉದ್ಘಾಟಿಸಬೇಕು. ಅವರ ಆಡಳಿತದಲ್ಲಿ ರಾಮಮಂದಿರ ಕನಸು ನನಸಾಗಿದೆ ಎಂದರೆ, ಅವರೇ ಉದ್ಘಾಟಿಸಬೇಕು” ಎಂದಿದ್ದಾರೆ. “ನಿಮಗೆ ಏನಾಗಿದೆ? ನಿಜವಾಗಿಯೂ ನೀವೇ ಪೋಸ್ಟ್‌ ಮಾಡುತ್ತಿದ್ದೀರಾ? ರಾಜಕೀಯವಾಗಿ ಏಳಿಗೆ ಹೊಂದದ ನೀವು ಇಂತಹ ಮಟ್ಟಕ್ಕೆ ಇಳಿಯಬಾರದಿತ್ತು” ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದೇನು?

“ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲು ಮೋದಿ ಅವರನ್ನು ರಾಮಭಕ್ತರು ಹೇಗೆ ಬಿಡುತ್ತಾರೆ? ಶ್ರೀರಾಮನು ಸೀತೆಯನ್ನು ರಕ್ಷಿಸಲು ಒಂದೂವರೆ ದಶಕವನ್ನು ಕಾಡಿನಲ್ಲೇ ಕಳೆದ, ಹೋರಾಡಿದ. ಹೆಂಡತಿಯನ್ನೇ ತೊರೆದ ನರೇಂದ್ರ ಮೋದಿ ಅವರು ಹೇಗೆ ಪೂಜೆ ಮಾಡಲು ಅರ್ಹರು” ಎಂದು ಸುಬ್ರಮಣಿಯನ್‌ ಸ್ವಾಮಿ ಪೋಸ್ಟ್‌ ಮಾಡಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರ ಪೋಸ್ಟ್‌ಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಸ್ವಾಮಿ ಅವರ ಅಭಿಪ್ರಾಯವನ್ನು ಒಪ್ಪಿದರೆ, ಹೆಚ್ಚಿನ ಜನ ತಿರುಗೇಟು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version