ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿರುವ ಸ್ನಾತಕೋತ್ತರ ಪದವಿಯ ಪ್ರಮಾಣಪತ್ರ (Modi Degree Certificate) ನೀಡಬೇಕು ಎಂದು ಅರ್ಜಿ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ 25 ಸಾವಿರ ದಂಡ ವಿಧಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಬಿಜೆಪಿ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಅವರ ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಮತ್ತೊಂದು ಹಂತದ ಚರ್ಚೆಗೆ ಗ್ರಾಸವಾಗಿದೆ.
2016ರಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ ಹಾಗೂ ಅರುಣ್ ಜೇಟ್ಲಿ ಅವರು ಸುದ್ದಿಗೋಷ್ಠಿ ನಡೆಸಿ, ಮೋದಿ ಎಂಎ ಪದವಿ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿದ್ದ ಫೋಟೊವನ್ನೇ ಸುಬ್ರಮಣಿಯನ್ ಸ್ವಾಮಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ, “ನರೇಂದ್ರ ಮೋದಿ ಅವರ ಪ್ರಮಾಣಪತ್ರದ ಬಗ್ಗೆ ಅಷ್ಟೊಂದು ಗಡಿಬಿಡಿ ಏಕೆ? ಆರು ವರ್ಷದ ಹಿಂದೆ ಅಮಿತ್ ಶಾ ಹಾಗೂ ಅರುಣ್ ಜೇಟ್ಲಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದ ಪ್ರಮಾಣಪತ್ರ ಇಲ್ಲಿದೆ” ಎಂದು ಬರೆದುಕೊಂಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಟ್ವೀಟ್
2016ರಲ್ಲಿ ಏನಾಗಿತ್ತು?
2016ರಲ್ಲಿ ಮೋದಿ ಅವರ ಶೈಕ್ಷಣಿಕ ಹಿನ್ನೆಲೆಯ ಕುರಿತು ವಿವಾದ ಉಂಟಾದ ಕಾರಣ ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಹಾಗೂ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮೋದಿ ಅವರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಿಡುಗಡೆಗೊಳಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಮೋದಿ ಪಡೆದ ಪದವಿ ಹಾಗೂ ಗುಜರಾತ್ ವಿವಿಯಿಂದ ಪಡೆದ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಇವು ನಕಲಿ ಪ್ರಮಾಣಪತ್ರ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು.
ಏನಿದು ಪಿಎಂ ಮೋದಿ ಪದವಿ ವಿವಾದ?
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಪ್ರತಿಪಕ್ಷಗಳು ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನಿಸಲಾರಂಭಿಸಿದವು. ಆಗ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ವಿವಿಯಿಂದ ಪದವಿ ಹಾಗೂ ದಿಲ್ಲಿ ವಿವಿಯಿಂದ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆಂದು ಹೇಳಿತ್ತು. ಅಲ್ಲದೇ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರದರ್ಶಿಸಿದ್ದರು.
ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಗಳ ಬಹಿರಂಗ ಕೋರಿ, ಮಾಹಿತಿ ಹಕ್ಕಿನ ಕಾಯ್ದೆಯಡಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಹಕ್ಕು ಆಯೋಗವು, ಅರ್ಜಿದಾರರ ಮಾಹಿತಿಯನ್ನು ಪೂರೈಸುವಂತೆ ಪಿಎಂಒ ಹಾಗೂ ವಿಶ್ವವಿದ್ಯಾಲಯಗಳಿಗೆ ಆದೇಶಿಸಿತ್ತು. ಗುಜರಾತ್ ವಿವಿಯು ಆಯೋಗ ಈ ಆದೇಶವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಗುಜರಾತ್ ಹೈಕೋರ್ಟ್, ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ: Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!