ತಿರುವನಂತಪುರಂ: ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವ ಮಾತು ಬಹುಶಃ ಇವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ವಯಸ್ಸು ಕೇವಲ ಸಂಖ್ಯೆಯಷ್ಟೇ. ಅದಕ್ಕೂ ಮನಸ್ಸಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದಕ್ಕೂ ಇವರು ದೃಷ್ಟಾಂತವಾಗಿ ನಿಲ್ಲುತ್ತಾರೆ. ಹೌದು ನಾವೀಗ ಹೇಳ ಹೊರಟಿರುವುದು ಅಪರೂಪದ ಸಾಧಕಿಯೊಬ್ಬರ ಬಗ್ಗೆ. ಕೇರಳದ ಕೊಚ್ಚಿಯ ರಾಧಾಮಣಿ ಅಮ್ಮ (Radhamani Amma) ಎನ್ನುವ 73 ವರ್ಷದ ಅಪರೂಪದ ಸಾಧಕಿಯ ಬಗ್ಗೆ. ಇವರು 11 ವಾಹನಗಳ ಲೈಸನ್ಸ್ ಹೊಂದಿರುವ ದೇಶದ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ. ಕ್ರೇನ್, ಜೆಸಿಬಿ, ರೋಡ್ ರೋಲರ್ ಸೇರಿದಂತೆ ಹಲವು ವಾಹನಗಳನ್ನು ಓಡಿಸುವ ಇವರು ಯುವ ಜನತೆಗೆ ಸ್ಫೂರ್ತಿ ಎನಿಸಿಕೊಂಡಿದ್ದಾರೆ (Success Story).
ರಾಧಾಮಣಿ ಅಮ್ಮ ಅವರ ಊರು ಕೊಚ್ಚಿಯ ಥೊಪ್ಪಂಪ್ಪಾಡಿ. 1981ರಲ್ಲಿ ಮೊದಲ ಬಾರಿ ಡ್ರೈವಿಂಗ್ ಕಲಿತ ಅವರು ಬಳಿಕ ಹಿಂದುರುಗಿ ನೋಡಲೇ ಇಲ್ಲ. ಸಾಧಾರಣವಾಗಿ ಮಹಿಳೆಯರು ಲಘು ವಾಹನ ಓಡಿಸುತ್ತಾರೆ. ಆದರೆ ಇವರು ಘನ ವಾಹನ ಚಾಲನೆಗೂ ಸೈ ಎನಿಸಿಕೊಂಡಿದ್ದಾರೆ. ಚಾಲನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಅವರ ಯಶೋಗಾಥೆಯ ವಿವರ ಇಲ್ಲಿದೆ.
ರಾಧಾಮಣಿ ಅಮ್ಮ ಅವರ ಬಳಿ ಲಾರಿ, ಬಸ್, ಜೆಸಿಬಿ, ಟ್ರೇಲರ್, ಕ್ರೇನ್, ಟ್ರ್ಯಾಕ್ಟರ್, ಫೋರ್ಕ್ ಲಿಫ್ಟ್, ರೋಡ್ ರೋಲರ್, ದ್ವಿಚಕ್ರ ವಾಹನ, ಅಗೆಯುವ ಯಂತ್ರಗಳು ಸೇರಿದಂತೆ ವಿವಿಧ ವಾಹನ ಚಾಲನಾ ಪರವಾನಗಿ ಇದೆ. ಹಲವು ಮಹಿಳೆಯರಿಗೆ ಶಿಕ್ಷಕಿಯಾಗಿ, ಮಾರ್ಗದರ್ಶಿಯಾಗಿ, ತಾಯಿಯಾಗಿ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ಸ್ಫೂರ್ತಿಯಾಗಿದ್ದಾರೆ.
ಯಶೋಗಾಥೆ
ರಾಧಾಮಣಿ ಅವರ ಸಾಧನೆಗೆ ಮುನ್ನುಡಿ ಆರಂಭವಾದದ್ದು 80ರ ದಶಕದಲ್ಲಿ. ತಮ್ಮ ಪತಿ ಲಾಲನ್ ಸಹಾಯದಿಂದ ಡ್ರೈವಿಂಗ್ ಕಲಿತ ಅವರು 1981ರಲ್ಲಿ ಸ್ಟೇರಿಂಗ್ ಹಿಡಿದರು. 1970ರಲ್ಲಿ ಲಾಲನ್ ಕೊಚ್ಚಿಯಲ್ಲಿ A-Z ಎನ್ನುವ ಡ್ರೈವಿಂಗ್ ತರಬೇತಿ ಶಾಲೆ ಆರಂಭಿಸಿದ್ದರು. ಅವರ ಮರಣಾನಂತರ 2004ರಿಂದ ಈ ತರಬೇತಿ ಕೇಂದ್ರವನ್ನು ರಾಧಾಮಣಿ ಅಮ್ಮ ಮತ್ತು ಅವರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ವಿಶೇಷ ಎಂದರೆ ಕೇರಳದಲ್ಲಿ ಭಾರೀ ವಾಹನಗಳಿಗೆ ಚಾಲನಾ ಪರವಾನಗಿ ಪಡೆಯಲು ಯಾವುದೇ ತರಬೇತಿ ಸಂಸ್ಥೆಗಳು ಇಲ್ಲದ ಸಮಯದಲ್ಲಿ, ಕಾನೂನು ಹೋರಾಟದ ಮೂಲಕ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು.
ʼʼಆರಂಭದಲ್ಲಿ ನಾನು ನಾಲ್ಕು ಚಕ್ರದ ವಾಹನ ಚಾಲನಾ ತರಬೇತಿ ಪಡೆದುಕೊಂಡೆ. ಡ್ರೈವಿಂಗ್ ಸ್ಕೂಲ್ ಆರಂಭಿಸಿದ ಬಳಿಕ ಘನ ವಾಹನ ಚಾಲನಾ ತರಬೇತಿ ನೀಡಲು ನಾನು ಮತ್ತು ಪತಿ ನಿರ್ಧರಿಸಿದ್ದೆವು. ಅದರಂತೆ ಘನ ವಾಹನ ಚಾಲನೆಯನ್ನೂ ಕಲಿತುಕೊಂಡೆ. ಕೇರಳದಲ್ಲಿ ಹೆವಿ ಡ್ರೈವಿಂಗ್ ಶಾಲೆಯನ್ನು ತೆರೆದ ಮೊದಲ ವ್ಯಕ್ತಿ ನಾನುʼʼ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಾಧಾಮಣಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಹಿಂದೆ ಹೀಗಿರಲಿಲ್ಲ
ʼʼಈಗೆಲ್ಲ ಮಹಿಳೆಯರು ವಾಹನ ಓಡಿಸುವುದು ಸಾಮಾನ್ಯ ಎಂಬಂತಾಗಿದೆ. ಆದರೆ ನಾಲ್ಕು ದಶಕಗಳ ಹಿಂದೆ, ನಾನು ಡ್ರೈವಿಂಗ್ ಕಲಿಯುವಾಗ ಪರಿಸ್ಥಿತಿ ಹೀಗಿರಲಿಲ್ಲ. ನಾನು ಕಾರು ಓಡಿಸುವಾಗ ನೆರೆಹೊರೆಯವೆಲ್ಲ ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು. ಕೆಲವರು ತಮಾಷೆ ಮಾಡುತ್ತಿದ್ದರು. ಆದರೆ ಇದ್ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಅದೆಷ್ಟೋ ಮಹಿಳೆಯರಿಗೆ ನನ್ನ ಸಾಧನೆ ಸ್ಫೂರ್ತಿಯಾಗಿದೆ ಎನ್ನುವುದನ್ನು ತಿಳಿದಾಗ ಸಂತಸವಾಗುತ್ತದೆʼʼ ಎನ್ನುತ್ತಾರೆ ರಾಧಾಮಣಿ.
ಇದನ್ನೂ ಓದಿ: Success Story: ಕಸದಲ್ಲಿಯೂ ಕಂಪು ಹರಡುವವರು!; ಬಾಡಿದ ಹೂ ಇಲ್ಲಿ ಮತ್ತೆ ದೇವರ ಪೂಜೆಗೆ ಸಿದ್ಧ
ಜೆಸಿಬಿ ಚಾಲನೆ ಅತ್ಯಂತ ಸವಾಲು
ಇಷ್ಟು ವಾಹನಗಳ ಪೈಕಿ ಜೆಸಿಬಿ ಚಾಲನೆಯೇ ಅತ್ಯಂತ ಕಷ್ಟವಾದುದು ಎನ್ನುವುದು ಅವರ ಅಭಿಪ್ರಾಯ. ʼʼಈಗ ಡ್ರೈವಿಂಗ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳಿವೆ. ಅನೇಕರು ಈಗ ವಾಹನ ಕಲಿಕೆಗೆ ಮುಂದೆ ಬರುತ್ತಿದ್ದಾರೆ. ಜತೆಗೆ ಟ್ಯಾಂಕರ್‌ನಂತಹ ಘನ ವಾಹನಗಳನ್ನು ಮಹಿಳೆಯರೂ ಓಡಿಸುತ್ತಿದ್ದಾರೆ ಎನ್ನುವುದು ಕೇಳುವಾಗ ಖುಷಿಯಾಗುತ್ತಿದೆʼʼ ಎಂದು ರಾಧಾಮಣಿ ಅಮ್ಮ ಹೇಳುತ್ತಾರೆ. ಒಟ್ಟಿನಲ್ಲಿ ಅವರ ಈ ಸಾಹಸಗಾಥೆ ಎಲ್ಲರಿಗೂ ಸ್ಫೂರ್ತಿ. ನನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತವರಿಗೆ ಮಾದರಿ.