Site icon Vistara News

Success Story:‌ ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?

helicofter

helicofter

ರಾಯ್‌ಪುರ: ಸಾಮಾನ್ಯವಾಗಿ ದೊಡ್ಡ ಉದ್ಯಮಿಗಳು, ಕೋಟ್ಯಧಿಪತಿಗಳು, ರಾಜಕಾರಣಿಗಳು, ನಟರು ಸ್ವಂತ ಹೆಲಿಕಾಪ್ಟರ್ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬರು ಕೃಷಿಕರು ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಹೊಂದಿದ್ದಾರೆ ಎಂದರೆ ನಂಬುತ್ತೀರಾ? ಹೌದು, ಛತ್ತೀಸ್‌ಗಢದ ಡಾ. ರಾಜಾರಾಮ್ ತ್ರಿಪಾಠಿ ಎನ್ನುವ 50 ವರ್ಷದ ರೈತ ಸ್ವಂತ ಹೆಲಿಕಾಪ್ಟರ್ ಹೊಂದಿ ಗಮನ ಸೆಳೆದಿದ್ದಾರೆ. ‘ಹೆಲಿಕಾಪ್ಟರ್ ಕೃಷಿಕ’ (Helicopter farmer) ಎಂದೇ ಇವರನ್ನು ಕರೆಯಲಾಗುತ್ತದೆ (Success Story).

ಬ್ಯಾಂಕ್‌ನ ಮಾಜಿ ಉದ್ಯೋಗಿ

ರಾಜಾರಾಮ್ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಬಳಿಕ ಕೃಷಿ ಮಾಡುವ ಉದ್ದೇಶದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಕರಿಮೆಣಸು ಮತ್ತು ಗಿಡ ಮೂಲಿಕೆ ಉತ್ಪನ್ನಗಳನ್ನು ಬೆಳೆಯುತ್ತಿರುವ ಅವರು ವಾರ್ಷಿಕವಾಗಿ ಸುಮಾರು 25 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದಾರೆ. ಕೃಷಿ ಕೆಲಸಕ್ಕಾಗಿಯೇ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಇವರ ಊರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ ಸುಮಾರು 215 ಕಿ.ಮೀ. ದೂರದಲ್ಲಿರುವ ಕೊಂಡಗಾಂವ್.

ಮಾ ದಂತೇಶ್ವರಿ ದೇವಿ ಹರ್ಬಲ್ ಗ್ರೂಪ್

ಇದು ರಾಜಾರಾಮ್ ಅವರ ಕಂಪೆನಿ ಹೆಸರು. ಇದು ನಕ್ಸಲ್ ಬಾಧಿತ ಪ್ರದೇಶ ಬಸ್ತಾರ್ ಜಿಲ್ಲೆಯಲ್ಲಿದೆ. ಇಲ್ಲಿ ಸುಸಜ್ಜಿತ ಕಚೇರಿ ಇದೆ. ಅನೇಕ ಮಂದಿಗೆ ಅವರು ತಮ್ಮ ಕಂಪನಿಯಲ್ಲಿ ಉದ್ಯೋಗ ಒದಗಿಸಿದ್ದಾರೆ.

ಕೃಷಿಗಾಗಿ ಹೆಲಿಕಾಪ್ಟರ್

ಕೃಷಿ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಬಳಸುವುದು ವಿದೇಶಗಳಲ್ಲಿ ಸಾಮಾನ್ಯವಾದರೂ ನಮ್ಮ ದೇಶದಲ್ಲಿ ಬಹಳ ಅಪರೂಪ. ಕರಿಮೆಣಸು ಬಳ್ಳಿಗಳಿಗೆ 300 ಅಡಿ ಎತ್ತರದಿಂದ ಔಷಧ ಸಿಂಪಡಿಸಬೇಕಾಗುತ್ತದೆ. ಅದಕ್ಕಾಗಿ ಅವರು ಹೆಲಿಕಾಪ್ಟರ್ ಖರೀದಿಸಿದ್ದಾಗಿ ಹೇಳುತ್ತಾರೆ.

ಯೋಚನೆ ಹೊಳೆದ ಬಗೆ

ʼʼ2008-09ರ ಕಾಲಘಟ್ಟ. ಸಾವಯವ ಕೃಷಿ ಬಗ್ಗೆ ವಿವಿಧೆಡೆ ಉಪನ್ಯಾಸ ನೀಡುತ್ತಿದ್ದೆ. ಅದರ ಭಾಗವಾಗಿ ಹಾಲೆಂಡ್‌ಗೆ ಹೋಗಿದ್ದೆ. ಅಲ್ಲಿ ಹೆಲಿಕಾಪ್ಟರ್ ಬಳಸಿ ಕೃಷಿ ಮಾಡುವುದನ್ನು ನೋಡಿದೆ. ನಮ್ಮಲ್ಲೂ ಇದನ್ಯಾಕೆ ಪ್ರಯತ್ನಿಸಬಾರದು? ಎನಿಸಿತು. ಅಂದಿನಿಂದ ಈ ಬಗ್ಗೆ ಯೋಜನೆ ರೂಪಿಸತೊಡಗಿದೆʼʼ ಎಂದು ರಾಜಾರಾಮ್ ಹೇಳುತ್ತಾರೆ.

ಡಾಕ್ಟರೇಟ್ ಪಡೆದ ಕೃಷಿಕ

ಅಚ್ಚರಿ ಎಂದರೆ ರಾಜಾರಾಮ್ ಪಿ.ಎಚ್.ಡಿ. ಪಡೆದಿದ್ದಾರೆ. ಬಾಲ್ಯದಲ್ಲೇ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಅವರು ತಮ್ಮ ಅಜ್ಜನ ಜತೆ ಸೇರಿ 7ನೇ ವಯಸ್ಸಿನಲ್ಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಂತೆ. ಒಂದು ಕಾಲದಲ್ಲಿ ಖರ್ಚಿಗೆ ಹಣವಿಲ್ಲದೆ ಪರದಾಡುತ್ತಿದ್ದ ಅವರು ಈಗ 9 ಫಾರ್ಮ್ ಹೌಸ್ ಹೊಂದಿದ್ದಾರೆ.

ಒಂದೇ ರೀತಿಯ ಬೆಳೆ ಸಮಸ್ಯೆ

ರೈತರು ಸಾಧಾರಣವಾಗಿ ಎದುರಿಸುವ ಸಮಸ್ಯೆ ಎಂದರೆ ಬೆಲೆ ಕುಸಿತ. ಕಷ್ಟಪಟ್ಟು ದುಡಿದು ಇನ್ನೇನು ಬೆಳೆ ಕೈಗೆ ಬಂತು ಎನ್ನುವಾಗ ಬೆಲೆ ಕುಸಿದು ಹಾಕಿದ ಖರ್ಚು ಕೈಗೆ ಬರದಂತಾಗುವ ಪರಿಸ್ಥಿತಿ ಅನೇಕ ಬಾರಿ ನಿರ್ಮಾಣವಾಗುತ್ತದೆ. ಇದಕ್ಕೆ ಕಾರಣವನ್ನು ರಾಜಾರಾಮ್ ವಿವರಿಸುತ್ತಾರೆ. ʼʼಬೇಡಿಕೆ ಬಂತೆಂದು ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯಲು ಮುಂದಾಗುವುದು ಸಮಸ್ಯೆಗೆ ಮುಖ್ಯ ಕಾರಣ. ಉದಾಹರಣೆಗೆ ಟೊಮ್ಯಾಟೋಗೆ ಬೇಡಿಕೆ ಇದ್ದಾಗ ಎಲ್ಲರೂ ಅದರತ್ತ ಮುಖ ಮಾಡುತ್ತಾರೆ. ಒಮ್ಮೆಲೆ ಅಧಿಕ ಪ್ರಮಾಣದಲ್ಲಿ ಟೊಮ್ಯಾಟೋ ಮಾರುಕಟ್ಟೆ ಪ್ರವೇಶಿಸಿದಾಗ ಬೆಲೆ ಪಾತಾಳಕ್ಕೆ ಇಳಿಯುತ್ತದೆʼʼ ಎನ್ನುವುದು ರಾಜಾರಾಮ್‌ ಅಭಿಮತ.

ರಾಜಾರಾಮ್ ಕಂಡುಕೊಂಡ ಉಪಾಯ

90ರ ದಶಕದಲ್ಲಿ ರಾಜಾರಾಮ್ ಎಸ್.ಬಿ.ಐ. ಬ್ಯಾಂಕ್‌ನ ಉನ್ನತ ಹುದ್ದೆಯಲ್ಲಿದ್ದರು. 7-8 ವರ್ಷ ಕೆಲಸ ಮಾಡಿದ್ದರು. ಬೇಸಾಯ ಮಾಡುವ ಉದ್ದೇಶದಿಂದ ಅವರು ರಾಜೀನಾಮೆ ನೀಡಿದರು. ಇದು ಅಂಗೀಕಾರವಾಗಲು ಸುಮಾರು 2 ವರ್ಷ ಹಿಡಿಯಿತಂತೆ. ʼʼಆ ಸಮಯದಲ್ಲಿ ನನಗೆ ಮದುವೆಯಾಯಿತು. ನಾನು ರಾಜೀನಾಮೆ ನೀಡಿದ ವಿಷಯ ತಿಳಿದಾಗ ಮನೆಯವರಿಗೆಲ್ಲ ಆಘಾತ ಉಂಟಾಗಿತ್ತು. ನಾನು ಬ್ಯಾಂಕರ್ ಎನ್ನುವ ಕಾರಣಕ್ಕೆ ನನಗೆ ಹುಡುಗಿ ಕೊಟ್ಟಿದ್ದರು. ಅದೇ ಸಮಯದಲ್ಲಿ ಕೃಷಿಕರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದುದು ಕೂಡ ಮನೆಯವರ ಆತಂಕಕ್ಕೆ ಕಾರಣವಾಗಿತ್ತುʼʼ ಎಂದು ‘ಹೆಲಿಕಾಪ್ಟರ್ ಕೃಷಿಕ’ ಹೇಳುತ್ತಾರೆ.

ಆರಂಭದಲ್ಲಿ ರಾಜಾರಾಮ್ ಉಳಿದ ಕೃಷಿಕರಂತೆ ಬೇಡಿಕೆ ಹೊಂದಿರುವ ಬೆಳೆಯತ್ತ ಗಮನ ಹರಿಸಿದ್ದರು. ಇದೇ ಕಾರಣದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. ಎರಡು-ಮೂರು ವರ್ಷಗಳ ಕಾಲ ಹೀಗೆ ಮುಂದುವರಿಯಿತು. ʼʼಆಗ ನನಗೆ ಮಾಮೂಲಿಗಿಂತ ವಿಭಿನ್ನ ಬೆಳೆ ಬೆಳೆಯಬೇಕೆಂಬ ಉಪಾಯ ಹೊಳೆಯಿತು. ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಕರಿಮೆಣಸು ಮತ್ತು ಕಾಡುಗಳಲ್ಲಿ ಸಿಗುವ ಗಿಡ ಮೂಲಿಕೆಯತ್ತ ನನ್ನ ಗಮನ ಹರಿಯಿತು. ಮೊದಲು ಯಾರೂ ನನ್ನ ಯೋಜನೆಯನ್ನು ಸ್ವೀಕರಿಸಲು ತಯಾರಿರಲಿಲ್ಲ. ಹುಚ್ಚ ಎನ್ನುವಂತೆ ಹಲವರು ನನ್ನನ್ನು ನೋಡಿದರುʼʼ ಎಂದು ರಾಜಾರಾಮ್ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ವೈವಿಧ್ಯ ಬೆಳೆ

ರಾಜಾರಾಮ್ ಕರಿ ಮೆಣಸಿನ ಜೊತೆಗೆ ಅಶ್ವಗಂಧ, ಇನ್ಸುಲಿನ್ ಮರ, ಆಸ್ಟ್ರೇಲಿಯನ್ ಚಹಾ, ಪಿಪ್ಲಿ ಸೇರಿ ಸುಮಾರು 22ರಷ್ಟು ಗಿಡ ಮೂಲಿಕೆಗಳನ್ನು ಬೆಳೆಯಲು ಆರಂಭಿಸಿದರು. ಕೃಷಿಗಾಗಿ ಅವರು ಬ್ಯಾಂಕ್‌ನಿಂದ ಮೊದಲ ಬಾರಿ 22 ಲಕ್ಷ ರೂ. ಸಾಲ ಪಡೆದಿದ್ದರು.

ಸುದೀರ್ಘ ವರ್ಷಗಳ ತಪಸ್ಸಿನ ಫಲ

ರಾಜಾರಾಮ್ ಅವರಿಗೆ ಯಶಸ್ಸು ಸುಲಭವಾಗಿ ಒಲಿಯಲಿಲ್ಲ. ಈ ಸ್ಥಿತಿಗೆ ಅವರು ತಲುಪಲು ಸುಮಾರು 35 ವರ್ಷಗಳೇ ಹಿಡಿದವು. ʼʼಒಮ್ಮೆಯಂತೂ ನಮ್ಮ ಜಮೀನು ಹರಾಜಿಗೆ ಬಂದಿತ್ತು. ಆ ವರ್ಷ ಬೆಳೆ ಉತ್ತಮವಾಗಿದ್ದರೂ ಸೂಕ್ತ ಬೆಲೆ ಸಿಕ್ಕಿರಲಿಲ್ಲʼʼ ಎಂದು ಅವರು ಹೇಳುತ್ತಾರೆ. ಇನ್ನು ಬ್ಯಾಂಕ್ ಸಾಲದ ಬಗ್ಗೆ ಅವರು ಕೊಡೆಯ ಉದಾಹರಣೆ ತೆಗೆದುಕೊಂಡು ಮನಮುಟ್ಟುವಂತೆ ವಿವರಿಸುತ್ತಾರೆ. ಮಳೆ ಬರುವಾಗ ನಿಮ್ಮ ಬಳಿ ಇರುವ ಕೊಡೆಯನ್ನು ಯಾರೋ ತೆಗೆದುಕೊಂಡು ಹೋಗುವಂತೆ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತವೆ. ಬೆಳೆ ಇನ್ನೇನು ಕೈ ಹಿಡಿಯುತ್ತದೆ ಎನ್ನುವಾಗ ಬ್ಯಾಂಕ್ ಜಮೀನನ್ನು ಹರಾಜು ಕೂಗುತ್ತದೆ ಎಂದು ಅವರು ವ್ಯಾಖ್ಯಾನಿಸುತ್ತಾರೆ. ಇದಕ್ಕಾಗಿ ಅವರು ಕೃಷಿ ಮಾಡಲು ಯಾರೂ ಸಾಲ ತೆಗೆದುಕೊಳ್ಳಬೇಡಿ ಎನ್ನುತ್ತಾರೆ.

ಗಿಡ ಮೂಲಿಕೆಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆಯಂತೆ. ಸಾವಯವ ಅರಶಿನ ಪುಡಿ, ನೆಲ್ಲಿಕಾಯಿ ಸೇರಿದಂತೆ ಕೆಲವೊಂದು ಉತ್ಪನ್ನಗಳನ್ನು ಅವರ ಮಗಳು ಆನ್‌ಲೈನ್‌ ಮೂಲಕ ಸುಮಾರು 10 ದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಒಟ್ಟಿನಲ್ಲಿ ಸೃಜನಾತ್ಮಕವಾಗಿ ಯೋಚಿಸಿದರೆ ಕೃಷಿಯನ್ನೂ ಲಾಭದಾಯಕವಾಗಿ ಮಾಡಬಹುದು ಎನ್ನುವುದನ್ನು ರಾಜಾರಾಮ್ ನಿರೂಪಿಸಿದ್ದಾರೆ.

ಇದನ್ನೂ ಓದಿ: Success Story: ಉಜಾಲಾ ಮೂಲಕ ಜನಸಾಮಾನ್ಯರೂ ಹೊಳೆಯುವಂತೆ ಮಾಡಿದ ರಾಮಚಂದ್ರನ್‌ ಯಶಸ್ಸಿನ ಕಥೆ

Exit mobile version