Site icon Vistara News

Success Story: ಕಸದಲ್ಲಿಯೂ ಕಂಪು ಹರಡುವವರು!; ಬಾಡಿದ ಹೂ ಇಲ್ಲಿ ಮತ್ತೆ ದೇವರ ಪೂಜೆಗೆ ಸಿದ್ಧ

bansal

bansal

ನವ ದೆಹಲಿ: ದೇವರ ಪೂಜೆಗೆ ಹೂ ಬಹಳ ಮುಖ್ಯ. ದೇವರ ಮುಡಿಗೇರಿದ ಹೂ ಬಾಡಿದ ಬಳಿಕ ಸಾಮಾನ್ಯವಾಗಿ ಕಸದ ಬುಟ್ಟಿ ಸೇರುತ್ತದೆ. ಆದರೆ ಇಲ್ಲಿ ಹಾಗಲ್ಲ. ಈ ಬಾಡಿದ ಹೂ ಧೂಪದ ಬತ್ತಿ, ಅಗರ್ ಬತ್ತಿಯಾಗಿ ಮತ್ತೆ ದೇವರ ಸೇವೆಗೆ ತಯಾರಾಗುತ್ತದೆ. ನಿರ್ಮಾಲ್ಯ ಎಂಬ ಕಂಪೆನಿಯ ಯಶಸ್ಸಿನ ಕಥೆ ಇದು (Success Story).

ದಿಲ್ಲಿಯ ಮಂಡೋಲಿ ಪ್ರದೇಶದ ದೇವಸ್ಥಾನಗಳ ಹೊರಗಡೆ ಎಸೆದಿರುವ ಬಾಡಿದ ಹೂಗಳನ್ನು ಮಹಿಳೆಯರು ಆರಿಸಿ ಅದನ್ನು ಅಗರ್ ಬತ್ತಿ ಮಾಡಲು ಉಪಯೋಗಿಸುತ್ತಾರೆ. ಈ ಉದ್ಯಮ ಕೋಟಿಗಟ್ಟಲೆ ವ್ಯಾಪಾರ ಮಾಡುತ್ತದೆ ಎಂದರೆ ನೀವು ನಂಬಲೇ ಬೇಕು. ಅದು ಹೇಗೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿರ್ಮಾಲ್ಯ ಕಂಪೆನಿ

ಗಾಜಿಯಾಬಾದ್‌ಗೆ ಹೊಂದಿಕೊಂಡಂತಿರುವ ದಿಲ್ಲಿಯ ಮಂಡೋಲಿಯಲ್ಲಿ ನಿರ್ಮಾಲ್ಯ ಎನ್ನುವ ಕಂಪೆನಿ ಇದೆ. ಇಲ್ಲಿ ಬಾಡಿದ ಹೂಗಳಿಂದ ದೇವರ ಆರಾಧನೆಗೆ ಬೇಕಾದ ಸುಮಾರು 10ರಷ್ಟು ಸುವಸ್ತುಗಳು ತಯಾರಾಗುತ್ತವೆ. ಈ ಬಗ್ಗೆ ಮಾತನಾಡುವ ಕಂಪೆನಿಯ ಸಹ ಸಂಸ್ಥಾಪಕ ರಾಜೀವ್ ಬನ್ಸಾಲ್, ”ಆರಂಭದಲ್ಲಿ ಜನರು ನಾನು ಕಸ ಹೆಕ್ಕುವವನು ಎಂದುಕೊಂಡಿದ್ದರು. ಊರವರು ಬಿಡಿ ಮನೆಯವರೂ ಕೂಡ ಹಾಗೇ ಚಿಂತಿಸಿದ್ದರು. ಆದರೆ ಈಗ ನಮ್ಮ ಕಂಪೆನಿ ಈ ಕಸದಿಂದ ಪ್ರತೀ ವರ್ಷ 7 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಮುಂದಿನ ವರ್ಷ 15 ಕೋಟಿ ರೂ. ತಲುಪುವ ಗುರಿ ಇದೆ. 80 ಮಂದಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳುತ್ತಾರೆ.

ಇವರ ಬಳಿ ಪಲ್ಪರ್ ಮೆಷಿನ್ ಇದೆ. ಹಿಟ್ಟು ತಯಾರಿಸುವ ಮೆಷಿನ್‌ನಂತೆ ಕಾಣುವ ಇದು ಸೇವಂತಿಗೆ, ಗುಲಾಬಿ ಹೂಗಳನ್ನು ಹುಡಿ ಮಾಡುತ್ತದೆ. ಇದನ್ನು ಬಳಸಿ ಪೂಜೆಗೆ ಬೇಕಾದ ವಿವಿಧ ರೀತಿಯ ಸಾಮಗ್ರಿಗಳನ್ನು ತಯಾರು ಮಾಡಲಾಗುತ್ತದೆ.

ಅಚಾನಕ್ಕಾಗಿ ಹೊಳೆದ ಯೋಜನೆ

”ನಾಲ್ಕೈದು ವರ್ಷಗಳ ಹಿಂದೆ ನಾನು ಜನ್ಮದಿನದ ಪ್ರಯುಕ್ತ ಶಿರ್ಡಿಗೆ ತೆರಳಿದ್ದೆ. ಹಲವು ಮಂದಿ ದೇವರಿಗೆ ಹೂ ಅರ್ಪಿಸುತ್ತಿದ್ದರು. ಅದನ್ನೇ ಗಮನಿಸುತ್ತಿದ್ದೆ. ಬಾಡಿದ ಹೂ ಬಳಿಕ ಕಸದ ತೊಟ್ಟಿಗೆ ಹೋಗಿ ಸೇರುತ್ತಿತ್ತು. ಇದು ನನ್ನನ್ನು ಬಹಳ ಕಾಡಿತು. ವಿಶ್ವಾಸ, ನಂಬಿಕೆಯಿಂದ ನಾವು ದೇವರಿಗೆ ಹೂವನ್ನು ಅರ್ಪಿಸುತ್ತೇವೆ. ಆದರೆ ಅದೇ ಹೂ ಬಳಿಕ ಕಸದ ತೊಟ್ಟಿಗೆ ಹೋದರೆ ನಂಬಿಕೆಗೆ ಘಾಸಿಯಾಗುತ್ತದಲ್ಲ ಎಂದು ಯೋಚಿಸಿದೆ. ದಿಲ್ಲಿಗೆ ಮರಳಿದ ಬಳಿಕವೂ ಅದೇ ಯೋಚನೆ ನನ್ನನ್ನು ಕೊರೆಯುತ್ತಿತ್ತು” ಎಂದು ರಾಜೀವ್ ಯೋಜನೆ ಹೊಳೆದ ಬಗೆಯನ್ನು ಹೇಳುತ್ತಾರೆ.

”ನನಗೆ ಬಾಡಿದ ಹೂವಿನಿಂದ ಅಗರ್‌ಬತ್ತಿ ಮಾಡುವ ತಂತ್ರಜ್ಞಾನದ ಬಗ್ಗೆ ತಿಳಿಯಿತು. ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದೆ. ಬಳಿಕ ದೇವಸ್ಥಾನಗಳ ಅರ್ಚಕರೊಂದಿಗೆ ಮಾತುಕತೆ ನಡೆಸಿದೆ. ದಿಲ್ಲಿ ಸುತ್ತಮುತ್ತ ಸುಮಾರು 300 ದೇಗುಲಗಳಿವೆ. ಈ ದೇವಸ್ಥಾನಗಳ ಬಾಡಿದ ಹೂ ಹೋಗುವುದು ಕಸದ ತೊಟ್ಟಿಗೆ ಬಳಿಕ ಯಮುನಾ ನದಿ ಒಡಲಿಗೆ. ಇದು ನನ್ನನ್ನು ತುಂಬಾ ಕಾಡಿತು. ಹೀಗಾಗಿ ನಿರ್ಮಾಲ್ಯ ಕಂಪೆನಿ ಆರಂಭಿಸಲು ನಿರ್ಧರಿಸಿದೆ” ಎಂದು ಅವರು ವಿವರಿಸುತ್ತಾರೆ.

ಹರಿಯಾಣ ಮೂಲದ ರಾಜೀವ್

ರಾಜೀವ್ ಅವರ ಹುಟ್ಟೂರು ಹರಿಯಾಣ. ಇಟ್ಟಿಗೆ ನಿರ್ಮಾಣ ಅವರ ಕುಲ ಕಸುಬು. ರಾಜೀವ್ ತಮ್ಮ ಶಿಕ್ಷಣ ಮುಗಿಸಿದ ಬಳಿಕ ಸುಮಾರು 14 ವರ್ಷ ಇಟ್ಟಿಗೆ ವ್ಯಾಪಾರ ಮಾಡುತ್ತಿದ್ದರು. ಬಳಿಕ ದಿಲ್ಲಿಗೆ ಬಂದು ಸುಮಾರು 4 ವರ್ಷ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅನಂತರ ಈ ಕಂಪೆನಿ ಹುಟ್ಟು ಹಾಕಿದರು.

ಮನೆಯವರಿಂದ ವಿರೋಧ

”ಇದ್ದ ಉದ್ಯೋಗ ಬಿಟ್ಟು ಬಾಡಿದ ಹೂವಿನಿಂದ ಅಗರ್ ಬತ್ತಿ ತಯಾರಿಸುತ್ತೇನೆ ಎಂದಾಗ ಮನೆಯವರು ವಿರೋಧ ವ್ಯಕ್ತಪಡಿಸಿದರು. ಆರಂಭದಲ್ಲಿ ನಾನು ಕಸ ಹೆಕ್ಕುವವನು ಎಂದು ಕುಟುಂಬಸ್ಥರು, ಗೆಳೆಯರು, ಪರಿಚಯಸ್ಥರು ಗೇಲಿ ಮಾಡಿದರು. ಇದು ನನಗೂ ತುಂಬಾ ನೋವು ತಂದಿತ್ತು. ಆದರೆ ಕ್ರಮೇಣ ಈ ಕೆಲಸ ನನಗೆ ತೃಪ್ತಿ ತಂದುಕೊಡತೊಡಗಿತು. ಬಳಿಕ ನಾನು ಇತರರ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ” ಎಂದು ರಾಜೀವ್ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾರೆ.

ಸಾಹಿಬಾಬಾದ್‌ನಲ್ಲಿ ಇವರ ಇನ್ನೊಂದು ಪ್ಲಾಂಟ್ ಇದೆ. ಇಲ್ಲಿ ಉತ್ಪನ್ನಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಸಹ ಸಂಸ್ಥಾಪಕರಾದ ಸುರ್ಭಿ ಬನ್ಸಾಲ್ ಮತ್ತು ಭರತ್ ಬನ್ಸಾಲ್ ಇಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಾರೆ. ಈ ಮೂವರು ಕಂಪೆನಿ ಆರಂಭಿಸಿದವರು. ಆರಂಭದಲ್ಲಿ 70 ಲಕ್ಷ ರೂ. ಹೂಡಿಕೆ ಮಾಡಲಾಗಿತ್ತು. ಮೊದಲ ವರ್ಷ ಈ ಕಂಪೆನಿಯ ವ್ಯಾಪಾರ 30 ಲಕ್ಷ ರೂ. ಆಗಿತ್ತು. ಈಗ ಪ್ರತಿ ದಿನ ಸುಮಾರು 80 ಟನ್ ಹೂಗಳನ್ನು ಸಂಗ್ರಹಿಸಲಾಗುತ್ತದೆ.

ಪರಿಸರ ಮಾಲಿನ್ಯ ತಡೆಗೆ ಕೊಡುಗೆ ನೀಡಿ

ʼʼಇಂದು ಹೂಗಳ ಬೆಳವಣಿಗೆಗಾಗಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ದೇವರಿಗೆ ಅರ್ಪಿಸಿದ ಬಳಿಕ ಇದನ್ನು ನದಿಗೆ ಎಸೆದರೆ ಪರಿಸರ ಮಾಲಿನ್ಯವಾಗುತ್ತದೆ. ಅದಕ್ಕಾಗಿ ಇಂತಹ ಪುನರ್ಬಳಕೆ ವಸ್ತುಗಳನ್ನು ತಯಾರಿಸಲು ಮುಂದಾಗಬೇಕು” ಎಂದು ರಾಜೀವ್ ಕರೆ ನೀಡುತ್ತಾರೆ.

ಇದನ್ನೂ ಓದಿ: Success Story:‌ ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?

Exit mobile version