ರುದ್ರಪ್ರಯಾಗ: ಉತ್ತರಾಖಂಡ್ನ ರುದ್ರಪ್ರಯಾಗದಲ್ಲಿ ಗುಡ್ಡ ಕುಸಿದು ಬಿದ್ದ ವಿಡಿಯೋ ವೈರಲ್ ಆಗಿದ್ದು, ಭಯ ಹುಟ್ಟಿಸುವಂಥ ದೃಶ್ಯ ಇದಾಗಿದೆ. ಇಲ್ಲಿನ ರುದ್ರಪ್ರಯಾಗ್ನ ತರ್ಸಲಿ ಎಂಬ ಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದಿದೆ. ಹೀಗಾಗಿ ಅಲ್ಲಿ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು. ದೊಡ್ಡದಾದ ಬೆಟ್ಟವೊಂದು ನಿಧಾನಕ್ಕೆ ಇಂಚಿಂಚೂ ಕುಸಿಯುತ್ತ, ಒಮ್ಮೆಲೇ ಕೆಳಗೆ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ. ಈ ಹೊತ್ತಲ್ಲಿ ಅಲ್ಲಿ ಹಲವು ವಾಹನಗಳೂ ಇದ್ದವು. ಆದರೆ ಅದೃಷ್ಟಕ್ಕೆ ಯಾವುದೇ ವಾಹನವೂ ಜಖಂ ಆಗಲಿಲ್ಲ, ಜನರ ಜೀವ ಹಾನಿಯೂ ಆಗಿಲ್ಲ.
ಅಲ್ಲಿ ವಾಹನ ಓಡಿಸುಕೊಂಡು ಬರುವವರಿಗೆ ಸ್ಥಳೀಯರು ಹೇಳುತ್ತಲೇ ಇದ್ದರು. ಇಲ್ಲಿನ ಗುಡ್ಡ ಈಗಾಗಲೇ ಒಮ್ಮೆ ಕುಸಿದಿದೆ. ಮತ್ತೆ ಕುಸಿಯುತ್ತದೆ. ಎಚ್ಚರಿಕೆಯಿಂದ ಇರಿ ಎಂದಿದ್ದರು. ಸದ್ಯ ಎಲ್ಲ ವಾಹನ ಸವಾರರನ್ನೂ ಸುರಕ್ಷಿತ ಪ್ರದೇಶಕ್ಕೆ ಕಳಿಸಲಾಗಿದೆ. ಕುಸಿದ ಗುಡ್ಡವನ್ನು ತೆರವುಗೊಳಿಸಿದ ಬಳಿಕವಷ್ಟೇ ಅವರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ಕೇದಾರನಾಥಕ್ಕೆ ಹೋಗುತ್ತಿದ್ದ ಯಾತ್ರಾರ್ಥಿಗಳನ್ನೆಲ್ಲ ರುದ್ರಪ್ರಯಾಗ, ಅಗಸ್ತ್ಯಮುನಿ, ತಿಲವಾರ, ಗುಪ್ತಕಾಶಿಗಳಲ್ಲೇ ತಡೆಯಲಾಗಿದೆ. ಹಾಗೇ, ಸೋನ್ಪ್ರಯಾಗ್ನಿಂದ ವಾಪಸ್ ಬರುತ್ತಿರುವವರನ್ನೂ ತಡೆದು ವಾಪಸ್ ಅಲ್ಲಿಗೇ ಹೋಗುವಂತೆ ಕಳಿಸಲಾಗಿದೆ. ಕೆಲವರು ಸೀತಾಪುರಕ್ಕೆ ಹೋಗಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರದಲ್ಲೇ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಹಲವೆಡೆ ಮಳೆ, ಭೂಕುಸಿತ, ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋಯಿತು ಎರಡು ಮಹಡಿಗಳ ಮನೆ