Site icon Vistara News

Jacqueline Fernandez | ‘ವಂಚಕ ಸುಕೇಶ್‌ ನನ್ನ ಜೀವನವನ್ನು ನರಕವಾಗಿಸಿದ್ದಾನೆ’ ಕೋರ್ಟ್‌ಗೆ ರಕ್ಕಮ್ಮ ಜಾಕ್ವೆಲಿನ್‌ ಮಾಹಿತಿ

Jacqueline Fernandez

ನವದೆಹಲಿ: 200 ಕೋಟಿ ರೂಪಾಯಿಗೂ ಅಧಿಕ ಹಣದ ಸುಲಿಗೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್‌ ನಟಿ, ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್‌ ಫರ್ನಾಂಡಿಸ್‌ (Jacqueline Fernandez) ಅವರು ವಂಚಕ ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಸುಕೇಶ್‌ ಚಂದ್ರಶೇಖರ್‌ ನನ್ನ ಭಾವನೆಗಳ ಜತೆ ಆಟವಾಡಿದ್ದಾನೆ. ನನ್ನ ಜೀವನವನ್ನು ನರಕವಾಗಿಸಿದ್ದಾನೆ” ಎಂಬುದಾಗಿ ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ಗೆ ತಿಳಿಸಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಮೌಲ್ಯದ ಉಡುಗೊರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಭಾಗವಾಗಿಯೇ ಪಟಿಯಾಲ ಹೌಸ್‌ ಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

“ಸುಕೇಶ್‌ ಚಂದ್ರಶೇಖರ್‌ ನನಗೆ ಸುಳ್ಳು ಹೇಳಿದ. ನನ್ನನ್ನು ಮೂರ್ಖಳನ್ನಾಗಿ ಮಾಡಿದ. ಇದರಿಂದ ನನ್ನ ವೃತ್ತಜೀವನ, ನನ್ನ ಜೀವನ ಹಾಳಾಯಿತು. ಆತ ನನ್ನ ಬದುಕನ್ನೇ ನರಕ ಮಾಡಿದ” ಎಂಬದಾಗಿ ಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

“ನನ್ನನ್ನು ಸುಕೇಶ್‌ಗೆ ಪರಿಚಯ ಮಾಡಿಸಿದ ಪಿಂಕಿ ಇರಾನಿ ಹಾಗೂ ಸುಕೇಶ್‌ಗೆ ವಂಚನೆ ಮಾಡುವುದೇ ಉದ್ದೇಶವಾಗಿತ್ತು. ಸುಕೇಶ್‌ ನನ್ನನ್ನು ಭೇಟಿಯಾಗಿ ಅಭಿಮಾನಿ ಎಂದು ಪರಿಚಯಿಸಿಕೊಂಡ. ಹಾಗೆಯೇ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಂಬಂಧಿ ಎಂದು, ಸನ್‌ ಟಿವಿಯ ಮಾಲೀಕ ಎಂದು ಹೇಳಿದ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕು ಎಂದು ಸಲಹೆ ನೀಡಿದ್ದ. ಎಲ್ಲವನ್ನು ನಂಬಿದ ನಾನು ಮೋಸ ಹೋದೆ” ಎಂದು ಹೇಳಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ 200 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ಸುಕೇಶ್‌ ಜತೆ ಮದುವೆಯಾಗಲು ತೀರ್ಮಾನಿಸಿದ್ದರು ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಸುಕೇಶ್‌ಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Sukesh Case | ಡ್ರೀಮ್ ಮ್ಯಾನ್ ಸುಕೇಶ್‌ನನ್ನು ಮದ್ವೆಯಾಗಲು ಹೊರಟಿದ್ದ ರಕ್ಕಮ್ಮ ಜಾಕ್ವೆಲಿನ್!

Exit mobile version