Site icon Vistara News

Bindeshwar Pathak: ಧ್ವಜಾರೋಹಣದ ಬಳಿಕ ಕುಸಿದು, ಮೃತಪಟ್ಟ ‘ಸುಲಭ ಶೌಚಾಲಯ’ ಹರಿಕಾರ ಬಿಂದೇಶ್ವರ ಪಾಠಕ್

bindeshwar Pathak

ನವದೆಹಲಿ: ಬರ್ಹಿದೆಸೆ ವಿರುದ್ಧ ಸಮರ ಸಾರಿದ್ದ ಮತ್ತು ಸಮುದಾಯ ಶೌಚಾಲಯಗಳ (community toilets) ನಿರ್ಮಾತೃ, ಸುಲಭ್ ಇಂಟರ್‌ನ್ಯಾಷನಲ್ (Sulabh International) ಸಂಸ್ಥಾಪಕ ಬಿಂದೇಶ್ವರ್ ಪಾಠಕ್ (Bindeshwar Pathak) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪರಿಸರ ನೈರ್ಮಲೀಕರಣ, ಘನ ತಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸುಧಾರಣೆ ಹಾಗೂ ಮಾನವ ಹಕ್ಕುಗಳ ಪರವಾಗಿ ಅವರು ಹೋರಾಡುತ್ತಿದ್ದರು. ಸುಲಭ ಶೌಚಾಲಯಗಳ (sulabh shauchalaya) ಪ್ರವರ್ತಕರಾಗಿದ್ದ ಬಿಂದೇಶ್ವರ್, ಸಮುದಾಯ ಸ್ವಚ್ಛತೆಗೆ ಹೊಸ ವ್ಯಾಖ್ಯಾನವನ್ನೇ ನೀಡಿದರು.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ, ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಅವರ ಜೀವ ಹೋಗಿತ್ತು ಏಮ್ಸ್ ವೈದ್ಯರು ಮಧ್ಯಾಹ್ನದ ಹೊತ್ತಿಗೆ ಘೋಷಿಸಿದರು.

Bindeshwar Pathak: ಪಾಠಕ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಪಾಠಕ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಿಂದೇಶ್ವರ್ ಪಾಠಕ್ ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸಾಮಾಜಿಕ ಸುಧಾರಣೆ ಮತ್ತು ಹಿಂದುಳಿದವರನ್ನು ಮೇಲೆತ್ತಲು ಅವರ ಮಾಡುತ್ತಿದ್ದ ಕೆಲಸಗಳು ಮತ್ತು ದೂರದೃಷ್ಟಿಯ ಅನುಕರಣೀಯ ಎಂದು ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಂದೇಶ್ವರ್ ಪಾಠಕ್ ಅವರು ಸ್ವಚ್ಛ ಭಾರತದ ವಿಷನ್ ಹೊಂದಿದ್ದರು. ಸ್ವಚ್ಛ ಭಾರತ್ ಮಿಷನ್‌ಗೆ ಅವರು ಬೆಂಬಲ ನೀಡಿದ್ದರು. ನಮ್ಮ ನಡುವಿನ ಮಾತುಕತೆ ವೇಳೆ, ಸ್ವಚ್ಛತೆಯ ಬಗೆಗಿನ ಅವರ ಪ್ಯಾಶನ್ ಎದ್ದು ಕಾಣುತ್ತಿತ್ತು. ಅವರ ಕಾರ್ಯಗಳು ಅನೇಕರಿಗೆ ಪ್ರೇರಣೆ ನೀಡಲಿವೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಶಿಕ್ಷಕರಾಗಿದ್ದ ಬಿಂದೇಶ್ವರ್ ಪಾಠಕ್

ಬಿಹಾರದ ವೈಶಾಲಿ ಜಿಲ್ಲೆಯ ರಾಮಪುರ್ ಬಘೇಲ್ ಹಳ್ಳಿಯ ಬ್ರಾಹ್ಮಣ ಕುಟುಂಬದಲ್ಲಿ ಬಿಂದೇಶ್ವರ್ ಪಾಠಕ್ ಅವರು ಜನಿಸಿದರು. ತಂದೆ ರಮಾಕಾಂತ್ ಪಾಠಕ್ ಮತ್ತು ತಾಯಿ ಯೋಗಮಾಯಾ ದೇವಿ. ಶಿಕ್ಷಣಕ್ಕಾಗಿ ಬಿಂದೇಶ್ವರ್ ಪಾಠಕ್ ಅವರು ಪಟನಾಗೆ ಸ್ಥಳಾಂತರಗೊಂಡರು ಮತ್ತು ಬಿ ಎನ್ ಕಾಲೇಜ್‌ಗೆ ಸೇರ್ಪಡೆಗೊಂಡರು. ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು. ಗಾಂಧಿ ಶತಮಾನೋತ್ಸವ ಸಮಿತಿಗೆ ಸ್ವಯಂ ಸೇವಕರಾಗಿ ಸೇರುವ ಮುಂಚೆ ಶಿಕ್ಷಕರಾಗಿ ಬಿಂದೇಶ್ವರ್ ಅವರು ಕೆಲಸ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Toilet Flush | ಪಬ್ಲಿಕ್‌ ಟಾಯ್ಲೆಟ್‌ಗಳಲ್ಲಿ ಫ್ಲಶ್‌ ಮಾಡುವವರಿಗೆ ವಿಜ್ಞಾನಿಗಳ ಎಚ್ಚರಿಕೆ ಏನು? ಇಲ್ಲಿದೆ ವಿಡಿಯೊ

ಮಹಾತ್ಮ ಗಾಂಧಿ ಪ್ರೇರಣೆ

ಮಹಾತ್ಮ ಗಾಂಧಿ ಅವರಿಂದ ಪ್ರೇರಣೆಗೊಂಡಿದ್ದ ಬಿಂದೇಶ್ವರ್ ಪಾಠಕ್ ಅವರು ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಕಳೆದ 50 ವರ್ಷಗಳ ಕಾಲ ಅವರು ಭಾರತದ ಜಾತಿ-ಆಧಾರಿತ ವ್ಯವಸ್ಥೆಯ ಅತ್ಯಂತ ಕೆಳಸ್ತರದಿಂದ ಬರುವ ಮತ್ತು ಹೆಚ್ಚಾಗಿ ಮಹಿಳೆಯರೇ ಕೆಲಸ ಮಾಡುವ ಪೌರ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version